ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 18ರ ಹರೆಯದ ಹುಡುಗಿಗೆ ಹಣದ ಅವಶ್ಯಕತೆ ಇತ್ತು. ಹಣಕ್ಕಾಗಿ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ಪಾತ್ರೆ ತೊಳೆಯುವ ಮೂಲಕ ಜೀವನ ನಡೆಸುತ್ತಿದ್ದಳು. ಇಂದು ಅವಳು ಅದೇ ರೆಸ್ಟೋರೆಂಟ್‌ನ ಮಾಲೀಕೆಯಾಗಿದ್ದಾಳೆ. ಈ ಸ್ಟೋರಿ ಓದುತ್ತಿದ್ದರೆ ಸಿನಿಮಾ ಕಥೆಯಂತೆ ಅನಿಸಬಹುದು ಆದರೆ ಇದು ನಿಜವಾದ ಘಟನೆ. ಅಮೆರಿಕದ ಓಹಿಯೋದಲ್ಲಿ ವಾಸಿಸುತ್ತಿರುವ 18 ವರ್ಷದ ಸಮಂತಾ ಫ್ರೇ ಎಂಬಾಕೆ ತಾನೂ ಕೆಲಸ ಮಾಡಿದ ರೆಸ್ಟೋರೆಂಟ್ ಖರೀದಿಸಿದ್ದಾಳೆ.
ಅವಳು ಅನೇಕ ವರ್ಷಗಳಿಂದ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಮಾಡಿದ್ದ ಹಣವನ್ನು ರೆಸ್ಟೋರೆಂಟ್ ಮಾಲೀಕರಿಗೆ ಪಾವತಿಸಿ ಖರೀದಿಸಿದ್ದಾಳೆ. ಈಗ ಚಿಕ್ಕ ವಯಸ್ಸಿನಲ್ಲೇ ರೆಸ್ಟೊರೆಂಟ್ ಮಾಲಕಿಯಾಗಿದ್ದಾಳೆ. " ನಾನು ಆರು ತಿಂಗಳ ಹಿಂದೆ ನಾನು ಖರೀದಿಸಲು ಬಯಸುತ್ತೇನೆ ಎಂದು ನನ್ನ ಮಾಲೀಕರಿಗೆ ಹೇಳಿದಾಗ, ಅವರು "ನಿನಗೆ ಹುಚ್ಚಾ? ಸುಮ್ಮನೇ ರಿಸ್ಕ್ ಏಕೆ? " ಎಂದಿದ್ದರು ಎಂದು ಸಮಂತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಸ್ತುತ ಸಮಂತಾಗೆ ಎಲ್ಲವೂ ಹೊಸತು. ವಾರದಲ್ಲಿ ಐದು ದಿನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. 2 ದಿನ ಕಾಲೇಜಿಗೆ ಹೋಗಿ ಓದುತ್ತಿದ್ದಾಳೆ. ರೆಸ್ಟೋರೆಂಟ್ ಹೆಸರನ್ನು ಬದಲಾಯಿಸಿ, ತನಗೆ ಬೇಕಾದ ಹಾಗೆ ನವೀಕರಿಸಿಕೊಂಡಿದ್ದಾಳೆ. 22 ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಆಕೆಯ ತಂದೆ ಕೂಡ ಮಗಳ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.
ಆರ್ಥಿಕ ತಜ್ಞರು ಆಕೆಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಅವರು ಆಕೆಯಲ್ಲಿ ಉತ್ತಮ ಹೂಡಿಕೆದಾರರ ಗುಣಗಳಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ."ಅವಳು ಕಾಲೇಜು ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದ ಹಣವನ್ನುಈ ರೀತಿ ಬಳಸಿಕೊಂಡಿರುವುದು ನಮಗೆ ಆಶ್ಚರ್ಯ ತಂದಿದೆ. ಅವಳ ವಯಸ್ಸಿನ ಅನೇಕ ಜನರು ಅದರ ಬಗ್ಗೆ ಯೋಚನೆ ಕೂಡ ಮಾಡಿರುವುದಿಲ್ಲ " ಎಂದು ತಜ್ಞರು ಹೇಳಿದ್ದಾರೆ.