ಮದುವೆ ಅನ್ನೋ ಬಂಧ ಎಲ್ಲಾ ಸಂಬಂಧಗಳಿಗಿಂತ ಪ್ರಮುಖವಾಗಿರುತ್ತೆ. ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಅಗಾಧವಾದ ಪರಿಣಾಮ ಬೀರೋ ಸಂಬಂಧವಾಗಿರುತ್ತದೆ. ಅದರ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗಿರುವುದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಹುಟ್ಟು, ಸಾವು, ಮದುವೆ, ಮೂರು ದೇವರ ಇಚ್ಛೆ ಎಂಬ ಮಾತಿದೆ. ಆದ್ದರಿಂದ ಮದುವೆಯು ಬಹುಮಟ್ಟಿಗೆ ಪೂರ್ವನಿರ್ಧರಿತವಾದ ಸಂಬಂಧವಾಗಿದೆ ಎಂದು ಭಾವಿಸಲಾಗಿದೆ.
ಕಪಲ್ ಗೋಲ್ಸ್: “ದಂಪತಿಗಳು ಕುಟುಂಬ, ಮಕ್ಕಳು, ವೃತ್ತಿ ಮತ್ತು ಜೀವನದ ಗುರಿಗಳ ಬಗ್ಗೆ ತಮ್ಮ ನಿರೀಕ್ಷೆಗಳನ್ನು ಪಟ್ಟಿ ಮಾಡಬೇಕು. ವೃತ್ತಿ ಜೀವನದ ನಿರೀಕ್ಷೆಗಳು, ಉದ್ಯೋಗ ನಷ್ಟ ಅಥವಾ ಕೆಲಸದ ಸಲುವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದರ ಕುರಿತು ಹೀಗೆ ಹತ್ತು ಹಲವು ವೈಯಕ್ತಿಕ ಗುರಿಗಳ ಬಗ್ಗೆ ಮುಕ್ತವಾಗಿ ಮದುವೆಗೆ ಮೊದಲೇ ನಿರ್ಧರಿಸುವುದು ಉತ್ತಮ ದಾಂಪತ್ಯ ಜೀವನಕ್ಕೆ ಮುನ್ನುಡಿ ಎಂದೇ ಹೇಳಬಹುದು” ಎಂದು ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಗೌರಾ ಲೋಹಾನಿ ಹೇಳುತ್ತಾರೆ.
ರಾಜಕೀಯ ದೃಷ್ಟಿಕೋನಗಳು: "ಒಬ್ಬ ವ್ಯಕ್ತಿಯು ಪ್ರಬಲವಾದ ರಾಜಕೀಯ ಅಭಿಪ್ರಾಯಗಳನ್ನು ಹೊಂದಿದ್ದರೆ, ಅಥವಾ ದಂಪತಿಗಳಲ್ಲಿ ಒಬ್ಬರು ಎಡ ಅಥವಾ ಬಲ ರಾಜಕೀಯ ಕಾರ್ಯಸೂಚಿಗಳನ್ನು ಹೊಂದಿದ್ದರೆ, ನಿಮ್ಮ ಪಾರ್ಟನರ್ ಇದಕ್ಕೆ ವಿರುದ್ದವಾದ ದೃಷ್ಟಿಕೋನವನ್ನು ಹೊಂದಿದ್ದರೆ, ಮುಂದೆ ದಾಂಪತ್ಯದಲ್ಲಿ ಇದೇ ದೊಡ್ಡ ತಲೆನೋವಾಗಿ ಕಾಡಬಹುದು. ರಾಜಕೀಯ ಪ್ರಭಾವ ಈ ಹಿಂದೆ ಅಷ್ಟೊಂದು ಮುಖ್ಯವೆನಿಸುತ್ತಿದ್ದಿಲ್ಲ. ಆದರೆ ಈಗ ಇದು ಕೂಡ ಮುಖ್ಯವಾಗಿದೆ” ಎಂದು ಕೌಲ್ ಹೇಳುತ್ತಾರೆ.
ಖರ್ಚುಗಳನ್ನು ಸಮವಾಗಿ ಹಂಚಿಕೆ ಮಾಡಿಕೊಳ್ಳಿ: "ವೆಚ್ಚದ ವಿಷಯಕ್ಕೆ ಬಂದಾಗ, ಯಾರು ಎಷ್ಟು ದುಡ್ಡನ್ನು ಕೊಡುತ್ತಾರೆ ಅಥವಾ ಯಾರು ಯಾವುದಕ್ಕೆ ಪಾವತಿಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು. ಇದರಿಂದ ನಿಮ್ಮ ದಾಂಪತ್ಯದಲ್ಲಿ ಹಣದ ವಿಷಯದಲ್ಲಿ ಒಂದು ಶಿಸ್ತು ಮುಂದುವರಿಯುತ್ತದೆ. ದಾಂಪತ್ಯದಲ್ಲಿ ಇಬ್ಬರೂ ಸಹ ಸಮವಾಗಿ ಹಣವನ್ನು ಖರ್ಷು ಮಾಡಿ ಉಳಿತಾಯ ಮಾಡುವುದರಿಂದ ನಿಮ್ಮ ಜೀವನಶೈಲಿ ಆರಾಮದಾಯಕವಾಗಿರುತ್ತದೆ. ಯಾವುದಕ್ಕೆ, ಯಾರು ಎಷ್ಟು ಖರ್ಚು ಮಾಡಿದ್ರೂ ಎಂಬುದರ ಕುರಿತು ಸಹ ಸ್ಪಷ್ಟ ಮಾಹಿತಿ ಇರುತ್ತದೆ” ಎಂದು ಶಾಲಿನಿ ಕೊಹ್ಲಿ ಹೇಳುತ್ತಾರೆ.
ಸರಿಯಾಗಿ ಮಾತನಾಡುವುದರ ಬಗ್ಗೆ ಚರ್ಚೆ ಮಾಡುವುದು: ಆರಂಭದಲ್ಲಿ, ದಂಪತಿಗಳು ಒಬ್ಬರಿಗೊಬ್ಬರು ತುಂಬಾ ಸುಂದರವಾಗಿ ಮಾತನಾಡಿಕೊಳ್ಳುತ್ತಿರುತ್ತಾರೆ. ಒಬ್ಬರ ತಪ್ಪು ಇನ್ನೊಬ್ಬರಿಗೆ ಆರಂಭದಲ್ಲಿ ಗೋಚರವಾಗುವುದಿಲ್ಲ. ಆದರೆ ಹೋಗ್ತಾ, ಹೋಗ್ತಾ ದಂಪತಿಗಳಲ್ಲಿ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಾ ಹೋಗುತ್ತವೆ. ಆದ್ದರಿಂದ ದಂಪತಿಗಳು ತಮ್ಮ ಸಂವಹನದ ಬಗ್ಗೆ ಯಾವಾಗಲೂ ಕಾಳಜಿ ವಹಿಸಬೇಕು. ಅವರು ಪರಸ್ಪರರ ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು.
ಲೈಂಗಿಕ ವಿಷಯಗಳು : "ಲೈಂಗಿಕ ಅನ್ಯೋನ್ಯತೆಯು ಸಂಬಂಧಗಳಲ್ಲಿ ಉದ್ಭವಿಸಬಹುದಾದ ಅನೇಕ ಸಮಸ್ಯೆಗಳ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ. ಲೈಂಗಿಕತೆಯು ಮದುವೆ ನಂತರ ದಂಪತಿಗಳು ಅನೋನ್ಯವಾಗಿರಲು ಸಹಾಯ ಮಾಡುತ್ತದೆ. ದಂಪತಿಗಳು ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಲೈಂಗಿಕ ಬಯಕೆಗಳನ್ನು ಚರ್ಚಿಸಬೇಕು ಮತ್ತು ನಂತರ ಉದ್ಭವಿಸಬಹುದಾದ ಅನ್ಯೋನ್ಯತೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಒಬ್ಬರಿಗೊಬ್ಬರು ತಮ್ಮ ಭಾವನಾತ್ಮಕ ದುರ್ಬಲತೆಗಳು ಮತ್ತು ದೇಹದ ಅಭದ್ರತೆಗಳನ್ನು ಹಂಚಿಕೊಳ್ಳುವುದು ಅವರ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ” ಎಂದು ಲೋಹಾನಿ ಅವರು ಹೇಳುತ್ತಾರೆ.