ಹಿಂದಿನ ಬರೀ 10 ವರ್ಷಕ್ಕೆ ಹೋಲಿಸಿಕೊಂಡರೆ ಕಲ್ಪಿಸಿಕೊಳ್ಳಲೂ ಆಗದ ರೀತಿಯಲ್ಲಿ ಜಗತ್ತು ಇಂದು ಬದಲಾಗಿದೆ. ಅದರಲ್ಲೂ ಮಹಿಳೆ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ತಮ್ಮ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಅವರು ದೃಢವಾದ ಹೆಜ್ಜೆಯನ್ನಿಡುತ್ತಿದ್ದಾರೆ. ಇದು ಪ್ರೀತಿ, ಸಂಬಂಧದ ವಿಚಾರದಲ್ಲೂ ಹೊರತಾಗಿಲ್ಲ. ಪ್ರೀತಿಯನ್ನು ಹೇಳಿಕೊಳ್ಳುವ, ಸಂಬಂಧವನ್ನು ನಿಭಾಯಿಸುವ ಹಾಗೆಯೇ ಮೌಢ್ಯದ ನಿಯಮಗಳನ್ನು ವಿರೋಧಿಸುವ ವಿಚಾರದಲ್ಲೂ ಹೆಣ್ಣು ಬದಲಾಗಿದ್ದಾಳೆ.
ಇನ್ನು, ಪ್ರೀತಿಯ ವಿಚಾರಕ್ಕೆ ಬಂದರೆ ಮೊದಲೆಲ್ಲ ಬರೀ ಹುಡುಗರೇ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದು ವಾಡಿಕೆಯಾಗಿತ್ತು. ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಸಂಕೋಚವೋ, ಭಯವೋ ಅಥವಾ ಏನಂದುಕೊಳ್ಳಬಹುದು ಎಂಬ ಕೀಳರಿಮೆಯೋ ಅವರಿಗೆ ಅಡ್ಡಲಾಗುತ್ತಿತ್ತು. ಆದರೆ ಈ ಪ್ರೀತಿಯ ವಿಷಯದಲ್ಲೂ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಈ ಮಧ್ಯೆ ಮಹಿಳೆಯರು ಪುರುಷರಿಗೆ ಪ್ರಪೋಸ್ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆಯಂತೆ. ಹಾಗಿದ್ರೆ ಅವುಗಳು ಯಾವುವು ಅನ್ನೋದನ್ನು ನೋಡೋಣ.
ಒಬ್ಬರಿಗೊಬ್ಬರು ಎಂಬ ಸಮಾನತೆ: ಪುರುಷರಿಗೆ ಪ್ರಪೋಸ್ ಮಾಡುವಂತಹ ಮಹಿಳೆಯರು, ಗಂಡು-ಹೆಣ್ಣಿನ ಬಗ್ಗೆ ಇರುವ ಸಾಮಾಜಿಕ ನಿರೀಕ್ಷೆಗಳು ಮತ್ತು ಸಾಂಪ್ರದಾಯಿಕ ನಿಮಯಗಳ ಬಗ್ಗೆ ಸವಾಲು ಮಾಡಬಹುದು. ಇದು ಹೆಚ್ಚು ಸಮಾನತೆಯ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ. ಹೀಗೆ ಬೆಳೆಯುವ ಸಂಬಂಧದಲ್ಲಿ ಸಮಾನತೆ ಇರುತ್ತದೆ. ಈ ರೀತಿಯಾಗಿ ತಮ್ಮ ಭವಿಷ್ಯವನ್ನು ಒಟ್ಟಿಗೆ ರೂಪಿಸಲು ಇಬ್ಬರೂ ಸಮಾನ ಕೊಡುಗೆ ನೀಡುತ್ತಾರೆ.
ಸಬಲಗೊಳಿಸುವುದರ ಜೊತೆಗೆ ವಿಶ್ವಾಸಪೂರ್ಣ ಸಂಬಂಧ: ತಾನಿಷ್ಟ ಪಟ್ಟವರನ್ನು ಪ್ರಪೋಸ್ ಮಾಡಲು ಯೋಜಿಸುವುದು ಮಹಿಳೆಯರನ್ನು ಹೆಚ್ಚು ಸಬಲಗೊಳಿಸಬಹುದು. ಇದು ಅವರ ಆತ್ಮವಿಶ್ವಾಸ ಮತ್ತು ದೃಢತೆಯನ್ನು ಹೆಚ್ಚಿಸಬಹುದು. ಅವರು ತಮಗೆ ಬೇಕಾದುದನ್ನು ಅನುಸರಿಸಲು ಮತ್ತು ತಮ್ಮ ಸಂತೋಷದ ಮೇಲೆ ಹಿಡಿತ ಸಾಧಿಸಲು ಸಮರ್ಥರಾಗಿದ್ದಾರೆ ಎಂಬ ಸಂದೇಶವನ್ನು ನೀಡುತ್ತದೆ. ಜೊತೆಗೆ ಅವರ ಒಟ್ಟಾರೆ ಸ್ವಾಭಿಮಾನದ ಮೇಲೆ ಧನಾತ್ಮಕವಾಗಿ ಇದು ಪರಿಣಾಮ ಬೀರುತ್ತದೆ.
ಮುಕ್ತ ಮಾತುಕತೆಗೆ ದಾರಿ: ಒಬ್ಬ ಮಹಿಳೆ ಪುರುಷನಿಗೆ ಪ್ರಪೋಸ್ ಮಾಡಿದಾಗ ಅದು ಸಂಬಂಧದಲ್ಲಿ ಅನೇಕ ವಿಚಾರಗಳನ್ನು ಮುಕ್ತವಾಗಿ ಮಾತನಾಡುವಂತೆ ಮಾಡುತ್ತದೆ. ಬದುಕಿನ ಕುರಿತಾಗಿ ಬದ್ಧತೆ, ಕನಸು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ ನಡೆಯಲು ಅನುವು ಮಾಡಿಕೊಡುತ್ತದೆ. ಇದರಿಂದ ಇಬ್ಬರೂ ಪಾರ್ಟ್‌ನರ್‌ಗಳ ನಡುವಿನ ಭಾವನಾತ್ಮಕ ಸಂಪರ್ಕವನ್ನು ಗಾಢವಾಗಿಸುತ್ತದೆ. ಹಾಗೆಯೇ ಪರಸ್ಪರರ ನಿರೀಕ್ಷೆಗಳ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ತಮ್ಮಿಷ್ಟದಂತೆ ಸಂಬಂಧವನ್ನು ನಿಭಾಯಿಸುವುದು: ನಮ್ಮ ಸಮಾಜದಲ್ಲಿ ಕೆಲವೊಂದಿಷ್ಟು ಲಿಂಗ ಆಧಾರಿತ ಪರಿಕಲ್ಪನೆಗಳಿವೆ. ಪುರುಷರು ಹಾಗೂ ಮಹಿಳೆಯರು ಹೀಗೆಯೇ ಇರಬೇಕು ಎಂಬಂಥ ಮಿತಿಗಳಿವೆ. ಆದರೆ ಇಂಥ ಮಹಿಳೆಯರು ಪುರುಷರಿಗೆ ಪ್ರಪೋಸ್ ಮಾಡುವುದರಿಂದ ಅಂತಹ ಅಲಿಖಿತ ನಿಯಮಗಳಿಗೆ ಸವಾಲು ಹಾಕಬಹುದು. ಬದಲಾಗಿ ಈ ಜೋಡಿ ತಮ್ಮದೇ ಆದ ವಿಶಿಷ್ಟ ಜೀವನ ಕ್ರಮವನ್ನು ರಚಿಸಬಹುದು. ಅವರ ಪಾಲಿಗೆ ಆ ಸಂಬಂಧವು ಏನು ಎಂಬುದನ್ನು ಅವರು ತೋರಿಸಬಹುದು.
ಸಂಬಂಧವನ್ನು ಬಲಪಡಿಸುವುದು: ಒಬ್ಬ ಮಹಿಳೆ ಪುರುಷನನಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಅದು ಈ ಸಂಬಂಧವನ್ನು ಬಲಪಡಿಸುತ್ತದೆ. ಪರಸ್ಪರ ಗೌರವವನ್ನು ಬಲಪಡಿಸುತ್ತದೆ. ಅವರು ಸಂಬಂಧಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬಹುದು. ಇದು ಅವರಿಗೆ ಆಳವಾದ ಬಂಧ ಮತ್ತು ಸಮಾನತೆಯ ಪ್ರಜ್ಞೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಇದು ಹೆಚ್ಚು ಸಾಮರಸ್ಯ ಮತ್ತು ಸಮತೋಲಿತ ಸಂಬಂಧಕ್ಕೆ ಕಾರಣವಾಗುತ್ತದೆ.