‘ಸೂರ್ಯ ಹುಟ್ಟೋ ತನಕ ಹಾಸಿಗೆಯಲ್ಲಿ ಮಲಗಿರಬೇಡಿ, ಬೆಳಗ್ಗೆ ಬೇಗ ಎದ್ದು ಸ್ವಲ್ಪ ವಾಕಿಂಗ್, ಜಾಗಿಂಗ್ ಅಂತ ಶುದ್ದವಾದ ಮತ್ತು ತಂಪಾದ ಗಾಳಿಯಲ್ಲಿ ಸ್ವಲ್ಪ ಹೊರಗೆ ಹೋಗಿ ಬರಬಾರ್ದಾ’ ಅಂತ ಮನೇಲಿ ದಿನ ಬೆಳಗಾದರೆ ಅಪ್ಪ-ಅಮ್ಮ ಹೇಳ್ತಾ ಇರೋದು ನಮ್ಮೆಲ್ಲರ ಕಿವಿ ಮೇಲೆ ಬಿದ್ದಿರುತ್ತದೆ. ಆದರೆ ನಮ್ಮಲ್ಲಿ ಅನೇಕರು ‘ಹೋಗಮ್ಮ, ಇನ್ನೂ ಸ್ವಲ್ಪ ಹೊತ್ತು ಮಲಗ್ತೀನಿ’ ಅಂತ ಎದೆವರೆಗೆ ಇರುವ ಹಾಸಿಗೆಯನ್ನು ಹಾಗೆ ಕೈಯಿಂದ ಪೂರ್ತಿಯಾಗಿ ಎಳೆದುಕೊಂಡು ಮುಖ ಮುಚ್ಚಿಕೊಂಡು ಮಲಗಿ ಬಿಡುತ್ತಾರೆ.
ಆದರೆ ಈ ಬೆಳಗಿನ ಹೊತ್ತಿನಲ್ಲಿ ವಾಕಿಂಗ್, ಜಾಗಿಂಗ್ ಮತ್ತು ಸೈಕ್ಲಿಂಗ್ ಅಂತ ಹೊರಗೆ ಹೋದವರಿಗೆ ಅದರ ಆರೋಗ್ಯ ಪ್ರಯೋಜನಗಳು ಏನು ಮತ್ತು ಈ ಬೆಳಗಿನ ಹೊತ್ತಿನ ಕಸರತ್ತುಗಳು ದಿನವಿಡೀ ನಮ್ಮನ್ನು ಎಷ್ಟು ಚುರುಕಾಗಿ ಮತ್ತು ಸಕ್ರಿಯರಾಗಿರಲು ಸಹಾಯ ಮಾಡುತ್ತವೆ ಅಂತ ತಿಳಿದಿರುತ್ತದೆ. ಬೆಳಗ್ಗೆ ನಾವು ಮಾಡುವ ವ್ಯಾಯಾಮಗಳು ನಿಜಕ್ಕೂ ನಮ್ಮ ದೇಹದ ಆರೋಗ್ಯವನ್ನು ವೃದ್ದಿಸುವುದಲ್ಲದೆ, ನಮ್ಮನ್ನು ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಸಹ ಸದೃಡವಾಗಿರಿಸುತ್ತದೆ.
ಅಧ್ಯಯನಗಳ ಪ್ರಕಾರ, ವಾಕಿಂಗ್ ರಕ್ತದೊತ್ತಡವನ್ನು ಸುಧಾರಿಸುತ್ತದೆ, ಹೃದಯ ಬಡಿತವನ್ನು ಸಮರ್ಪಕಗೊಳಿಸುತ್ತದೆ, ಕೊಬ್ಬು ಮತ್ತು ದೇಹದ ತೂಕ, ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಬಹುಮುಖ್ಯವಾಗಿ ನಮ್ಮ ಖಿನ್ನತೆಯನ್ನು ಸಹ ಕಡಿಮೆ ಮಾಡುತ್ತದೆ. ವಾಕಿಂಗ್ ನ ಅನೇಕ ಪ್ರಯೋಜನಗಳನ್ನು ವರ್ಷಗಳಿಂದ ಹಲವಾರು ಅಧ್ಯಯನಗಳು ತೋರಿಸಿವೆಯಾದರೂ, ಆರೋಗ್ಯಕರ ಜೀವನಕ್ಕಾಗಿ ದಿನಕ್ಕೆ ಎಷ್ಟು ನಡೆಯಬೇಕು ಎಂಬುದರ ಬಗ್ಗೆ ಇನ್ನೂ ಅನೇಕರಿಗೆ ಸ್ಪಷ್ಟತೆ ಇಲ್ಲ ಅಂತ ಹೇಳಲಾಗುತ್ತಿದೆ.
ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವುದು ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಮತ್ತು ಬುದ್ಧಿಮಾಂದ್ಯತೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುವ ಅಧ್ಯಯನಗಳಿವೆ. ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯುವ ಗುರಿಯನ್ನು ಸಾಧಿಸುವುದು ಫಿಟ್ನೆಸ್ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ, ಅದಕ್ಕಿಂತ ಕಡಿಮೆ ಹೆಜ್ಜೆಗಳು ಸಹ ಅನೇಕ ಪ್ರಯೋಜನಗಳನ್ನು ನೀಡುತ್ತವೆ.
ಪ್ರತಿದಿನ 3,800 ಹೆಜ್ಜೆಗಳು ಅರಿವಿನ ಕುಸಿತವನ್ನು 25 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಮತ್ತೊಂದು ಇತ್ತೀಚಿನ ಅಧ್ಯಯನದ ಪ್ರಕಾರ, ದಿನಕ್ಕೆ 7,000 ಹೆಜ್ಜೆಗಳನ್ನು ನಡೆಯುವ ಜನರು ಪ್ರತಿದಿನ ಕಡಿಮೆ ಹೆಜ್ಜೆಗಳನ್ನು ತೆಗೆದುಕೊಳ್ಳುವವರಿಗಿಂತ ಬೇಗನೆ ಸಾಯುವ ಅಪಾಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದಾಗ್ಯೂ, ಜಡ ಜೀವನಶೈಲಿಯಿಂದಾಗಿ, ಅನೇಕ ಜನರು ದಿನಕ್ಕೆ 5000 ದಿಂದ 7000 ಹೆಜ್ಜೆಗಳನ್ನು ನಡೆಯುವುದಕ್ಕೂ ಸಹ ತುಂಬಾನೇ ಹೆಣಗಾಡುತ್ತಾರೆ.