ಭೂತಾನ್: 14 ದಿನಗಳ ಕಾಲ ಯಾವುದಾದರೂ ದೇಶಕ್ಕೆ ಟ್ರಿಪ್ ಹೋಗ್ಬೇಕು ಅನ್ನೋ ಯೋಜನೆಯನ್ನು ನೀವು ಹಾಕಿಕೊಂಡಿದ್ದರೆ ಖಂಡಿತವಾಗಿಯೂ ಭೂತಾನ್ ದೇಶಕ್ಕೆ ಹೋಗಬಹುದು. ಭಾರತದ ಅತ್ಯಂತ ಸುಂದರವಾದ ನೆರೆಹೊರೆಯ ದೇಶಗಳ ಪೈಕಿ ಭೂತಾನ್ ಕೂಡ ಒಂದು. ವಿಶೇಷ ಅಂದ್ರೆ ಭೂತಾನ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಸಾಲಿನಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಯಾಕೆ ಅನ್ನೋದನ್ನು ತಿಳಿಯಲು ಭೂತಾನ್ ಪ್ರವಾಸ ಹೋಗಿ ಬರಬಹುದು.
ಕಝಕಿಸ್ತಾನ: ಸಾಮಾನ್ಯವಾಗಿ ಬರುವ ಪ್ರಯಾಣಿಕರಿಗೆ ಕಝಕಿಸ್ತಾನ ಸೂಕ್ತ ದೇಶವಾಗಿಲ್ಲದಿರಬಹುದು. ಆದರೆ ಪ್ರವಾಸಕ್ಕೆಂದು ಬರುವವರಿಗೆ ಈ ದೇಶ ಹೆಚ್ಚು ಮೌಲ್ಯಯುತವಾಗಿ ಕಾಣಬಹುದು. ಸುಮಾರು 14 ದಿನಗಳ ಕಾಲ ನೀವು ಕಝಕಿಸ್ತಾನದಲ್ಲಿ ವೀಸಾ ಇಲ್ಲದೇ ಪ್ರಯಾಣಿಸಬಹುದು. ಅತ್ಯಾಕರ್ಷಕ ವಾಸ್ತು ಶಿಲ್ಪಗಳು, ಅಲ್ಮಾಟಿ, ನಯನ ಮನೋಹರವಾದ ದೃಶ್ಯಗಳು ನಿಮ್ಮನ್ನು ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಪ್ರೇರೇಪಿಸುತ್ತದೆ.
ಮಾರಿಷಸ್: ಭಾರತೀಯರಿಗೆ ಅತ್ಯಂತ ಸ್ನೇಹಪರ ದೇಶಗಳಲ್ಲಿ ಒಂದಾಗಿರುವ ಮಾರಿಷಸ್ನಲ್ಲಿ ನೀವು ವೀಸಾ ಇಲ್ಲದೆ ಸುಮಾರು 90 ದಿನಗಳ ಕಾಲ ಉಳಿಯಬಹುದು. ಭಾರತೀಯರನ್ನು ಆತ್ಮೀಯವಾಗು ಸ್ವಾಗತಿಸುವ ಮಾರಿಷಸ್ನಲ್ಲಿ ಬೆರಗುಗೊಳಿಸುವ ಕಡಲತೀರಗಳು, ಉಷ್ಣವಲಯದ ಆಹ್ಲಾದಕರ ವಾತಾವರಣ ನಿಮ್ಮ ಮನಸ್ಸನ್ನು ಮತ್ತಷ್ಟು ಹಿತಗೊಳಿಸುತ್ತದೆ. ಒಂದೊಳ್ಳೆಯ ಪ್ರವಾಸ ಅನುಭವ ಪಡೆಯಬೇಕಿದ್ದರೆ ಮಾರಿಷಸ್ಗೆ ಟ್ರಿಪ್ ಪ್ಲಾನ್ ಹಾಕಿ.
ಸೈಂಟ್ ಕಿಟ್ಸ್ ಮತ್ತು ನೆವಿಸ್: 90 ದಿನಗಳ ಕಾಲ ವೀಸಾ ಇಲ್ಲದೇ ಟೂರ್ ಮಾಡಬೇಕು ಅನ್ನೋ ಪ್ಲಾನ್ ನೀವು ಹಾಕಿಕೊಂಡಿದ್ದರೆ ಖಂಡಿತವಾಗಿಯೂ ಸೈಂಟ್ ಕಿಟ್ಸ್ ಮತ್ತು ನೆವಿಸ್ಗೆ ಭೇಟಿ ನೀಡಬಹುದು. ಅವಳಿ ದ್ವೀಪ ರಾಷ್ಟ್ರವಾಗಿರುವ ಸೈಂಟ್ ಕಿಟ್ಸ್ ಮತ್ತು ನೆವಿಸ್ ಪ್ರಪಂಚದ ಅತ್ಯಂತ ಸುಂದರ ಕಡಲತೀರಗಳ ಪೈಕಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರೇಮಿಗಳಿಗಂತೂ ಇಲ್ಲಿ ಸ್ವರ್ಗ ಸದೃಶ್ಯವಾದ ಅನುಭವಗಳು ಉಂಟಾಗುತ್ತದೆ.
ಸೈಂಟ್ ವಿನ್ಸೆಂಟ್ ಮತ್ತು ಗ್ರೆನೆಡೈನ್ಸ್: ಈ ದೇಶದಲ್ಲಿ ನೀವು ವೀಸಾದ ಅಗತ್ಯವಿಲ್ಲದೆ ಸುಮಾರು ಒಂದು ತಿಂಗಳ ಕಾಲ ಸುತ್ತಾಡಬಹುದು. ಹಡಗುಗಳಲ್ಲಿ ಪ್ರಯಾಣಿಸುವುದುನ್ನು ನೀವು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಈ ದೇಶವನ್ನು ಮಾತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಇಲ್ಲಿ ಹಲವಾರು ಸುಂದರವಾದ ದ್ವೀಪಗಳಿದ್ದು, ಇಲ್ಲಿ ಉಳಿದುಕೊಳ್ಳಲು ನೀವು ಮುಂಚಿತವಾಗಿಯೂ ಬುಕ್ ಮಾಡಿಕೊಳ್ಳಬಹುದು.
ಟ್ರಿನಿಡಾಡ್ ಮತ್ತು ಟೊಬ್ಯಾಗೋ: ವಿಶ್ವದ ಅನೇಕ ದೇಶಗಳನ್ನು ಸುತ್ತುವ ಹವ್ಯಾಸ ನೀವು ಹೊಂದಿದ್ದರೆ ದ್ವೀಪ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಅನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬೇಡಿ. ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅತ್ಯದ್ಭುತವಾದ ಪ್ರದೇಶವಾದ ಇಲ್ಲಿ ವಿಶ್ವದ ನಾನಾ ಬಗೆಯ ವೈವಿಧ್ಯಮಯ ಪಕ್ಷಿಗಳನ್ನು ಕಾಣಲು ಸಾಧ್ಯವಿದೆ. ಸುಮಾರು 90 ದಿನಗಳ ಕಾಲ ಇಲ್ಲಿ ನೀವು ವೀಸಾ ಇಲ್ಲದೆ ಉಳಿದುಕೊಳ್ಳಬಹುದು.