ಇಂದು ನಾಡಿನಾದ್ಯಂತ ಯುಗಾದಿ ಹಬ್ಬ ಸಡಗರ ಮನೆ ಮಾಡಿದೆ. ಯುಗಾದಿ ಎಂದರೆ ಹೊಸಯುಗದ ಆರಂಭ, ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯನ್ನು ಹಿಂದೂಗಳು ಹೊಸವರ್ಷವೆಂದು ಕರೆಯುತ್ತಾರೆ. ಯುಗಾದಿಯನ್ನು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಆಚರಿಸುತ್ತಾರೆ. ಇದು ಹೊಸತನಕ್ಕೆ ಹಾದಿ ಹಾಗೂ ಸಂಭ್ರಮದ ದಿನ. ಈ ಹಬ್ಬದಲ್ಲಿ ವಿವಿಧ ಭಕ್ಷ್ಯಗಳನ್ನು ಮನೆಯಲ್ಲಿ ಮಾಡಿ ಸವಿಯುತ್ತಾರೆ. ಅದರಲ್ಲಿಯೂ ಹೋಳಿಗೆ ಇಲ್ಲದೇ ಯುಗಾದಿ ಹಬ್ಬ ಇನ್ಕಂಪ್ಲೀಟ್ ಎಂದೇ ಹೇಳಬಹುದು. ಆದರೆ ಯಾವಾಗಲೂ ಒಂದೇ ರೀತಿಯ ಹೋಳಿಗೆ ಸವಿದು ಬೇಸರವಾಗಿದ್ರೆ ಈ ವೆರೈಟಿ ಹೋಳಿಗೆಗಳನ್ನು ಮನೆಯಲ್ಲಿ ಟ್ರೈ ಮಾಡಿ.
ಬೇಳೆ ಹೋಳಿಗೆ ಮಾಡುವ ವಿಧಾನ: ಮೊದಲು ನೆನೆಸಿದ ಕಡಲೆ ಬೇಳೆ ಬೇಯಿಸಿಕೊಳ್ಳಿ. ಬಳಿಕ ನೀರು ತೆಗೆದು ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಳ್ಳಿ. ನಂತರ ಇದನ್ನು ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ. ಬಳಿಕ ಹೋಳಿಗೆ ಹಿಟ್ಟಿಗೆ ಅರಿಶಿಣ ಹಾಕಿ ಕಲಸಿಕೊಳ್ಳಿ. ನಂತರ ಹೋಳಿಗೆ ಆಕಾರಕ್ಕೆ ತಟ್ಟಿಕೊಂಡು ಹೂರ್ಣ ಇಟ್ಟು ಲಟ್ಟಿಸಬೇಕು. ಒಂದು ತವಾಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೋಳಿಗೆ ಹಾಕಿ ಕಾಯಿಸಿಕೊಳ್ಳಿ. ಈಗ ಬೇಳೆ ಹೋಳಿಗೆ ಸವಿಯಲು ಸಿದ್ಧ.
ಕ್ಯಾರೆಟ್ ಹೋಳಿಗೆಗೆ ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು. ಮಾಡುವ ವಿಧಾನ: ಮೊದಲು ಮೈದಾ, ಚಿರೋಟಿ ರವೆ, ಉಪ್ಪು, ನೀರು, ಎಣ್ಣೆ ಹಾಕಿ ಕಣಕವನ್ನು ತಯಾರಿಸಿಕೊಳ್ಳಿ. ಮತ್ತೊಂದು ಪ್ಯಾನ್ನಲ್ಲಿ ಬೇಯಿಸಿ ರುಬ್ಬಿಕೊಂಡ ಕ್ಯಾರೆಟ್, ರುಬ್ಬಿದ ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಹಾಕಿಕೊಂಡು ಊರ್ಣ ತಯಾರಿಸಿಕೊಳ್ಳಿ. ಕಣಕದ ಉಂಡೆ ತೆಗೆದುಕೊಂಡು, ಊರ್ಣದ ಉಂಡೆಯನ್ನು ಸ್ಟಫ್ ಮಾಡಿ ಲಟ್ಟಿಸಿಕೊಂಡು ಬೇಯಿಸಿದರೆ ಕ್ಯಾರೆಟ್ ಹೋಳಿಗೆ ರೆಡಿ.
ಖರ್ಜೂರ ಹೋಳಿಗೆಗೆ ಬೇಕಾಗುವ ಸಾಮಗ್ರಿಗಳು: ಖರ್ಜೂರ, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು. ಮಾಡುವ ವಿಧಾನ: ಮೈದಾ, ಚಿರೋಟಿ ರವೆ, ಉಪ್ಪು, ನೀರು ಹಾಕಿ ಹಿಟ್ಟು ತಯಾರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ಗೆ ಬೀಜ ತೆಗೆದಿಟ್ಟುಕೊಂಡ ಖರ್ಜೂರ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿ, ಬೆಲ್ಲ ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪ್ಯಾನ್ಗೆ ಹಾಕಿ ಬಿಸಿ ಮಾಡಿಕೊಳ್ಳಿ. ಹಿಟ್ಟನ್ನು ಉಂಡೆ ಮಾಡಿಕೊಂಡು ಅದಕ್ಕೆ ಊರ್ಣವನ್ನು ಸ್ಟಫ್ ಮಾಡಿ ಲಟ್ಟಿಸಿ, ಬೇಯಿಸಿದರೆ ಖರ್ಜೂರದ ಹೋಳಿಗೆ ರೆಡಿ.
ಪೈನಾಪಲ್ ಹೋಳಿಗೆಗೆ ಬೇಕಾದ ಸಾಮಾಗ್ರಿಗಳು: ಪೈನಾಪಲ್, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು. ಮಾಡುವ ವಿಧಾನ: ಮೊದಲು ಒಂದು ಬೌಲ್ನಲ್ಲಿ ಮೈದಾ, ಚಿರೋಟಿ ರವೆ, ಚಿಟಿಕೆ ಉಪ್ಪು ನೀರು ಹಾಕಿ ಕಲಸಿ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಬಿಡಬೇಕು. ಮತ್ತೊಂದು ಪ್ಯಾನ್ನಲ್ಲಿ ಸಣ್ಣಗೆ ಹೆಚ್ಚಿಕೊಂಡ ಪೈನಾಪಲ್ ಅನ್ನು ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ಒಂದು ಜಾರ್ಗೆ ಹಾಕಿ ರುಬ್ಬಿಕೊಂಡು ಬೌಲ್ಗೆ ಶಿಫ್ಟ್ ಮಾಡಿಕೊಳ್ಳಬೇಕು. ಅದೇ ಜಾರ್ ತೆಂಗಿನ ತುರಿ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಎರಡೂ ಮಿಶ್ರಣವನ್ನು ಸ್ಟಿಮ್ನಲಿಟ್ಟು ಬೇಯಿಸಿಕೊಳ್ಳಬೇಕು. ಇದಕ್ಕೆ ನೀರು ಮಾಡಿಕೊಂಡ ಬೆಲ್ಲ ಹಾಕಿ ಕುದಿಯುವವರೆಗೂ ಕೈಯ್ಯಾಡಿಸಬೇಕು. ಈ ಹಂತದಲ್ಲಿ ಹುರಿದುಕೊಂಡ ಚಿರೋಟಿ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನೀರಿನಾಂಶ ಹೋಗಿ ಈ ಮಿಶ್ರಣ ಊರ್ಣದ ರೂಪಕ್ಕೆ ತಿರುಗುವವರೆಗೂ 5-6 ಚಮಚ ತುಪ್ಪ ಹಾಕುತ್ತಾ ಚೆನ್ನಾಗಿ ಕೈಯ್ಯಾಡಬೇಕು. ಊರ್ಣ ತಯಾರಾದ ನಂತರ ಸಣ್ಣ ಉಂಡೆ ಕಟ್ಟಿ ಕಣಕವನ್ನು ತೆಗೆದುಕೊಂಡು ಸ್ಟಫ್ ಮಾಡಿ ಲಟ್ಟಿಸಿ ಬೇಯಿಸಿದರೆ ಪೈನಾಪಲ್ ಹೋಳಿಗೆ ಸವಿಯಲು ಸಿದ್ಧ.
ಬಾದಾಮಿ ಹೋಳಿಗೆಗೆ ಬೇಕಾದ ಸಾಮಾಗ್ರಿಗಳು: ಬಾದಾಮಿ, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಕೇಸರಿ, ಮೈದಾ, ಚಿರೋಟಿ ರವೆ, ಅರಿಶಿಣ, ನೀರು, ಉಪ್ಪು. ಮಾಡುವ ವಿಧಾನ: ಮೊದಲು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ಒಂದು ಬೌಲ್ನಲ್ಲಿ ಮೈದಾ, ಚಿರೋಟಿ ರವೆ, ಅರಿಶಿಣ, ಚಿಟಿಕೆ ಉಪ್ಪು ಹಾಗೂ ನೀರು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ನೀರಾಗಿಯೇ ಕಲಸಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಬಿಡಿ. ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಜಾರ್ಗೆ ಹಾಕಿಕೊಂಡು ಇದಕ್ಕೆ ತೆಂಗಿನ ತುರಿ, ಏಲಕ್ಕಿ, ಕೇಸರಿ ಹಾಕಿ ರುಬ್ಬಿಕೊಳ್ಳಿ. ನೀರು ಹಾಕದೇ ಇದನ್ನು ಪೌಡರ್ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ಬೆಲ್ಲ ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಬೌಲ್ಗೆ ಶಿಫ್ಟ್ ಮಾಡಿ ಉಂಡೆ ಕಟ್ಟುಕೊಳ್ಳಿ. ಮೊದಲೇ ಕಲಸಿಟ್ಟುಕೊಂಡ ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಅದಕ್ಕೆ ಬಾದಾಮಿ ಊರಣವನ್ನು ಸ್ಟಫ್ ಮಾಡಿ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿದರೆ ಬಾದಾಮಿ ಹೋಳಿಗೆ ರೆಡಿ.
ಮಾವಿನ ಹಣ್ಣಿನ ಹೋಳಿಗೆಗೆ ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು, ಉಪ್ಪು, ಅರಿಸಿನ, ಎಣ್ಣೆ, ನೀರು, ಚಿರೋಟಿ ರವೆ, ತೆಂಗಿನತುರಿ, ಸಕ್ಕರೆ, ಮಾವಿನಹಣ್ಣು, ತುಪ್ಪ. ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಉಪ್ಪು, ಅರಿಶಿನ ಹಾಗೂ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ನಾದಿ. ಹೋಳಿಗೆ ಹಿಟ್ಟಿನ ಹದಕ್ಕೆ ಮೈದಾಹಿಟ್ಟಿನ ಮಿಶ್ರಣವನ್ನು ಕಲೆಸಿಡಿ. ಈಗ ನೆನೆಸಿದ ಚಿರೋಟಿ ರವೆ ಹಾಗೂ ತೆಂಗಿನತುರಿಯನ್ನು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ, ನಂತರ ಅದೇ ಮಿಕ್ಸಿನಲ್ಲಿ ಮಾವಿನಹಣ್ಣಿನ ತಿರುಳನ್ನು ರುಬ್ಬಿ. ಈ ಎರಡನ್ನೂ ಮಿಶ್ರಣ ಮಾಡಿ, ದಪ್ಪ ತಳದ ಪಾತ್ರೆಗೆ ಹಾಕಿ ಸ್ಟೌ ಮೇಲಿರಿಸಿ. ಅದಕ್ಕೆ ಏಲಕ್ಕಿ ಪುಡಿ ಹಾಗೂ ಸಕ್ಕರೆ ಸೇರಿಸಿ ಕೈಯಾಡಿಸುತ್ತಲೇ ಇರಿ. ಈ ಮಿಶ್ರಣ ಒಂದು ಹದಕ್ಕೆ ಬಂದ ಬಳಿಕ ಸ್ಟೌ ಆಫ್ ಮಾಡಿ. ಇದನ್ನು ಬಿಸಿ ಇರುವಾಗಲೇ ಉಂಡೆ ಮಾಡಿ ಇರಿಸಿಕೊಳ್ಳಿ. ನಂತರ ಕಲೆಸಿಟ್ಟುಕೊಂಡ ಮೈದಾಹಿಟ್ಟನ್ನು ಅಂಗೈ ಗಾತ್ರಕ್ಕೆ ತಟ್ಟಿಕೊಂಡು ಈ ಉಂಡೆಗಳನ್ನು ಅದರಲ್ಲಿ ಇಟ್ಟು ಲಟ್ಟಿಸಿ. ತವಾದ ಮೇಲೆ ತುಪ್ಪ ಸವರಿ ಎರಡೂ ಕಡೆ ಬೇಯಿಸಿ.
ಸ್ಟ್ರಾಬೆರಿ ಹೋಳಿಗೆಗೆ ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು, ಎಣ್ಣೆ, ಅರಿಶಿನ, ಉಪ್ಪು, ಸಕ್ಕರೆ, ರವೆ, ಸ್ಟ್ರಾಬೆರಿ, ಸ್ಟ್ರಾಬೆರಿ ಪ್ಲೇವರ್, ಏಲಕ್ಕಿ ಪುಡಿ, ತುಪ್ಪ. ಮಾಡುವ ವಿಧಾನ: ಮೈದಾಹಿಟ್ಟು, ಎಣ್ಣೆ, ಅರಿಸಿನ ಹಾಗೂ ಉಪ್ಪು ಈ ಎಲ್ಲವನ್ನೂ ಮಿಶ್ರಣ ಮಾಡಿ. ಅದಕ್ಕೆ ನೀರು ಸೇರಿಸಿ ಹೋಳಿಗೆ ಹಿಟ್ಟನ್ನು ತಯಾರಿಸಿ. ಇದನ್ನು ಗಂಟೆಗಳ ಕಾಲ ಹಾಗೆ ಇಡಿ. ದಪ್ಪ ತಳದ ಪಾತ್ರೆಯನ್ನು ಸ್ಟೌ ಮೇಲಿಡಿ. ಅದಕ್ಕೆ 1 ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ರವೆಯನ್ನು ಹಾಕಿ ಹುರಿದುಕೊಳ್ಳಿ. ನಂತರ ಅದನ್ನು ತೆಗೆದಿಟ್ಟು, ಅದೇ ಪಾತ್ರೆಗೆ ಪುನಃ 1 ಚಮಚ ತುಪ್ಪ ಹಾಕಿ ತೊಳೆದು ಕತ್ತರಿಸಿಕೊಂಡ ಸ್ಟ್ರಾಬೆರಿ ಸೇರಿಸಿ. ಸ್ಟ್ರಾಬೆರಿ ಮೃದುವಾಗುವವರೆಗೂ ಕೈಯಾಡಿಸಿ. ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಲು ಬಿಡಿ. ಸಕ್ಕರೆ ಸಂಪೂರ್ಣ ಕರಗಿದ ಮೇಲೆ ಅದಕ್ಕೆ ಹುರಿದುಕೊಂಡ ರವೆ ಹಾಕಿ ಗಂಟಿಲ್ಲದಂತೆ ತಿರುವಿ. ಅದಕ್ಕೆ ಏಲಕ್ಕಿ ಪುಡಿ ಹಾಗೂ ಸ್ಟ್ರಾಬೆರಿ ಎಸೆನ್ಸ್ ಸೇರಿಸಿ, ಈ ಎಲ್ಲವೂ ಪಾಕ ಆಗುವವರೆಗೂ ಕೈಯಾಡಿಸಿ. ಕೈಗೆ ಅಂಟದಂತೆ ನೋಡಿಕೊಳ್ಳಿ. ನಂತರ ಸ್ಟೌ ಆರಿಸಿ. ಬಿಸಿ ಇರುವಾಗಲೇ ಉಂಡೆ ಮಾಡಿ ಇಡಿ. ಹೋಳಿಗೆ ಹಿಟ್ಟನ್ನು ಉಂಡೆ ಮಾಡಿ, ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಸ್ಟ್ರಾಬೆರಿ ಉಂಡೆ ಇರಿಸಿ, ಸಂಪೂರ್ಣ ಕವರ್ ಮಾಡಿ, ನಂತರ ಹರಿಯದಂತೆ ಲಟ್ಟಿಸಿ. ನಂತರ ಪಾನ್ಗೆ ತುಪ್ಪ ಸವರಿ ಎರಡೂ ಕಡೆ ಬೇಯಿಸಿ.