ಬೇಸಿಗೆ ಕಾಲ ಬಂತೆಂದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗೋದು ಸಹಜ. ಬೆವರುಸಾಲೆ, ಚರ್ಮದ ಮೇಲೆ ದದ್ದುಗಳು ಮೂಡುವುದು, ತುರಿಕೆ ಬರುವುದು, ಬೆವರು ಹೆಚ್ಚಾಗಿ ಅಲರ್ಜಿ ಆಗುವುದು ಇವೆಲ್ಲಾ ಸಾಮಾನ್ಯ. ಅಂತೆಯೇ ಅತಿಯಾದ ಬೆವರಿನಿಂದಾಗಿ ಕೆಲವರಿಗೆ ಕುತ್ತಿಗೆ ಭಾಗವು ಕಪ್ಪಾಗುತ್ತದೆ. ಇದರಿಂದ ಅವರಿಗೆ ಮುಜುಗರ ಉಂಟಾಗುತ್ತದೆ. ಹಾಗಂತ ಟೆನ್ಶನ್ ಮಾಡ್ತಾ ಕೂರಬೇಡಿ. ಈ ಕುತ್ತಿಗೆ ಭಾಗದ ಕಪ್ಪು ಹೋಗಲಾಡಿಲು ಮನೆಯಲ್ಲೇ ಸಿಂಪಲ್ ಟಿಪ್ಸ್ ಇವೆ. ಅವುಗಳನ್ನು ಫಾಲೋ ಮಾಡಿದ್ರೆ ಖಂಡಿತಾ ಕುತ್ತಿಗೆ ಭಾಗದ ಕಪ್ಪು ಮಾಯವಾಗುತ್ತದೆ. ಹಾಗಿದ್ರೆ ಆ ಸಲಹೆಗಳನ್ನು ನೋಡೋಣ ಬನ್ನಿ.
ಅಡುಗೆ ಮನೆಯಲ್ಲೇ ಇರುವ ಕೆಲವ ಪದಾರ್ಥಗಳಿಂದ ತಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಬಹುದು. ಆದ್ರೆ ಕೆಲವರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಬೆನ್ನು ಬೀಳುತ್ತಾರೆ. ಇವು ರಾಸಾಯನಿಕಯುಕ್ತವಾಗಿರುತ್ತವೆ. ಜೊತೆಗೆ ನಮ್ಮ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಹೀಗಾಗಿ ನೈಸರ್ಗಿಕವಾಗಿ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಆಲೂಗಡ್ಡೆ ಕುತ್ತಿಗೆ ಭಾಗದ ಕಪ್ಪು ಹೋಗಲಾಡಿಸುವ ನೈಸರ್ಗಿಕ ಪದಾರ್ಥವಾಗಿದೆ. ಎಲ್ಲರ ಅಡುಗೆ ಮನೆಯಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದನ್ನು ಬಳಸಿ ನಿಮ್ಮ ಕುತ್ತಿಗೆ ಭಾಗದ ಕಪ್ಪು ಬಣ್ಣವನ್ನು ಸುಲಭವಾಗಿ ತೆಗೆದುಹಾಕಬಹುದು. ಆಲೂಗಡ್ಡೆಯಲ್ಲಿ ನ್ಯಾಚುರಲ್ ಬ್ಲೀಚಿಂಗ್ ಅಂಶ ಇರುವುದರಿಂದ ಇದು ತ್ವಚೆಯನ್ನು ಬಿಳಿಯಾಗಿಸುತ್ತದೆ. ಹಾಗಾಗಿ ಆಲೂಗಡ್ಡೆಯ ಸಿಪ್ಪೆ ತೆಗೆದು, ಅದನ್ನು ತುರಿದುಕೊಂಡು, ಅದರ ರಸವನ್ನು ಕಪ್ಪಾಗಿರುವ ಕುತ್ತಿಗೆ ಭಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಕ್ರಮೇಣ ನಿಮ್ಮ ಕತ್ತಿನ ಭಾಗದ ಕಪ್ಪು ಮಾಯವಾಗುತ್ತದೆ. ಜೊತೆಗೆ ಆಲೂಗಡ್ಡೆ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
ನಿಂಬೆ ಹಣ್ಣು ಸಹ ತ್ವಚೆಯ ಅಂದನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ನಿಮ್ಮ ಕುತ್ತಿಗೆ ಭಾಗದ ಕಪ್ಪು ತೆಗೆಯಲು ನಿಂಬೆ ಮತ್ತು ಜೇನುತುಪ್ಪ ಮಿಶ್ರಣ ಅತ್ಯಂತ ಸಹಕಾರಿಯಾಗಿದೆ. ಒಂದು ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ, ಆ ಪೇಸ್ಟ್ನ್ನು ಕುತ್ತಿಗೆ ಭಾಗಕ್ಕೆ ಹಚ್ಚಿ. ಪ್ರತಿ ದಿನ ಹೀಗೆ ಮಾಡುವುದರಿಂದ ಕುತ್ತಿಗೆ ಭಾಗದ ಕಪ್ಪು ಮಾಯವಾಗಿ ತ್ವಚೆ ಹೊಳೆಯುತ್ತದೆ.
ಮತ್ತೊಂದು ಮನೆ ಮದ್ದು ಬಾದಾಮಿ ಎಣ್ಣೆ ಹಚ್ಚುವುದು. ಈ ಬಾದಾಮಿ ಎಣ್ಣೆ ಕೊಂಚ ದುಬಾರಿ. ಆದರೆ ಚರ್ಮದ ರಕ್ಷಣೆ ವಿಷಯಕ್ಕೆ ಬಂದರೆ ಮುಂಚೂಣಿಯಲ್ಲಿರುತ್ತದೆ. ಈ ಎಣ್ಣೆಯಲ್ಲಿ ತ್ವಚೆಯ ಆರೈಕೆಗೆ ಬೇಕಾದ ವಿಟಮಿನ್ ಎ, ಡಿ & ಇ ಜೊತೆಗೆ ಒಮೆಗಾ-6 ಕೊಬ್ಬಿನಾಮ್ಲಗಳು ಇವೆ. ಹೀಗಾಗಿ ನಿಯಮಿತವಾಗಿ ಬಾದಾಮಿ ಎಣ್ಣೆಯನ್ನು ಕಪ್ಪಾಗಿರುವ ಕುತ್ತಿಗೆ ಭಾಗಕ್ಕೆ ಹಚ್ಚಬೇಕು. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.
ತ್ವಚೆಯ ರಕ್ಷಣೆ ಮಾಡಲು ಇರುವ ನೈಸರ್ಗಿಕ ಕಾವಲುಗಾರ ಅಲೋವೇರಾ ಎಂದರೆ ತಪ್ಪಾಗಲ್ಲ. ಇದು ಎಲ್ಲಾ ಚರ್ಮ ಸಮಸ್ಯೆಗಳಿಗೆ ಮುಕ್ತಿ ಕೊಡುತ್ತದೆ. ಅಲೋವೇರಾ ಜೆಲ್ನ್ನು ಕಪ್ಪಾಗಿರುವ ಕುತ್ತಿಗೆ ಭಾಗಕ್ಕೆ ಪ್ರತಿದಿನ ಹಚ್ಚಿ ಮಸಾಜ್ ಮಾಡಿ. ಇದರಲ್ಲಿರುವ ವಿಟಮಿನ್ಗಳು ಮತ್ತು ಖನಿಜಾಂಶಗಳಿಂದ ತ್ವಚೆಯ ಕಪ್ಪು ಬಣ್ಣ ಹೋಗುತ್ತದೆ. ನಿಮ್ಮ ಕುತ್ತಿಗೆ ಭಾಗ ಶ್ವೇತವರ್ಣದಿಂದ ಕಂಗೊಳಿಸುತ್ತದೆ.