ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆ ಆದರೂ ಟ್ರೆಕ್ಕಿಂಗ್ ಹೋಗಬೇಕು ಎಂದು ಬಯಸುತ್ತಾರೆ. ಪ್ರಕೃತಿಯೊಂದಿಗೆ ಸಾಮರಸ್ಯದ ಪ್ರಯಾಣವು ದೇಹ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಜೊತೆಗೆ ದೈಹಿಕ ಶಕ್ತಿ ಮತ್ತು ಮಾನಸಿಕ ದೃಢತೆಗೆ ಸವಾಲೊಡ್ಡುತ್ತದೆ. ಹಾಗಾಗಿ ಟ್ರಕ್ಕಿಂಗ್ ವೇಳೆ ಎದುರಾಗುವ ಕೆಲವು ಸಮಸ್ಯೆಗಳನ್ನು ಎದುರಿಸಲು ಕೆಲವು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅದು ಯಾವುವು ಎಂದು ಹೇಳುತ್ತೇವೆ ಕೇಳಿ.
ದೈಹಿಕ ಸಿದ್ಧತೆ: ಟ್ರೆಕ್ಕಿಂಗ್ ಪ್ರಾರಂಭಿಸುವ ಮುನ್ನ ದೈಹಿಕವಾಗಿ ಸದೃಢವಾಗಿರುವುದು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರುವುದು ಮುಖ್ಯ. ಸಾಮಾನ್ಯವಾಗಿ ನೆಲದ ಮೇಲೆ ನಡೆಯುವುದಕ್ಕೂ ಮಲೆನಾಡಿನ ಒರಟು ದಾರಿಯಲ್ಲಿ ನಡೆಯುವುದಕ್ಕೂ ವ್ಯತ್ಯಾಸವಿದೆ. ಎತ್ತರಕ್ಕೆ ಹೋಗುವಾಗ ಅಗತ್ಯವಾದ ಸ್ನಾಯುಗಳು, ಹೃದಯ ಬಡಿತ ನಿಯಂತ್ರಣ ಮತ್ತು ಉಸಿರಾಟದ ವ್ಯಾಯಾಮಗಳಿಗೆ ಒಗ್ಗಿಕೊಳ್ಳಲು ನೀವು ವ್ಯಾಯಾಮಗಳನ್ನು ಮಾಡಬೇಕು. ನೀವು ಪ್ರತಿದಿನ ನಿಮ್ಮ ಮನೆಯಲ್ಲಿ ಮೆಟ್ಟಿಲನ್ನು ಹತ್ತುವುದು ಮತ್ತು ಕೆಳಗೆ ಇಳಿಯುವುದನ್ನು ಅಭ್ಯಾಸ ಮಾಡಬಹುದು.
ಮಾರ್ಗ ಮತ್ತು ಮಾರ್ಗದರ್ಶಿ ಆಯ್ಕೆ: ಟ್ರೆಕ್ಕಿಂಗ್ಗೂ ಮುನ್ನ ಸೂಕ್ತವಾದ ಮಾರ್ಗವನ್ನು ಮತ್ತು ಜ್ಞಾನ ಹೊಂದಿರುವ ಮಾರ್ಗದರ್ಶಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಿಮ್ಮ ಅನುಭವದ ಮಟ್ಟ ಮತ್ತು ಫಿಟ್ನೆಸ್ ಮಟ್ಟಕ್ಕೆ ಹೊಂದಿಕೆಯಾಗುವ ಮಾರ್ಗವನ್ನು ಆಯ್ಕೆಮಾಡಿ. ಹೋಗುವ ಮಾರ್ಗ, ಭೂಪ್ರದೇಶ ಮತ್ತು ಹವಾಮಾನ ಕುರಿತ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದನ್ನು ಮರೆಯಬೇಡಿ. ಸ್ಥಳವನ್ನು ಚೆನ್ನಾಗಿ ತಿಳಿದಿರುವ ಅನುಭವಿ ಮಾರ್ಗದರ್ಶಿಯನ್ನು ಸಹ ಕರೆದುಕೊಂಡು ಹೋಗಿ.
ಬಟ್ಟೆ ಮತ್ತು ಪಾದರಕ್ಷೆಗಳು: ಹವಾಮಾನ ಮತ್ತು ಭೂಪ್ರದೇಶದ ಪರಿಸ್ಥಿತಿಗಳನ್ನು ಪರಿಗಣಿಸಿ ಟ್ರಕ್ಕಿಂಗ್ಗೆ ಸೂಕ್ತವಾದ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಯ್ಕೆಮಾಡಿ. ಲೇಯರ್ಡ್ ಉಡುಪುಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಬಿಸಿಲು, ಮಳೆ ಮತ್ತು ಚಳಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಗಾಯಗಳು ಆಗುವುದನ್ನು ತಪ್ಪಿಸಲು ಉತ್ತಮ ಗುಣಮಟ್ಟದ, ಗಟ್ಟಿಮುಟ್ಟಾದ ಪಾದರಕ್ಷೆಗಳನ್ನು ಧರಿಸಿ.
ಸುರಕ್ಷತೆ: ಕಾಡಿನಲ್ಲಿ ಬಿಸಿಲು ಮತ್ತು ಕೀಟಗಳಿರುತ್ತದೆ. ಹಾಗಾಗಿ ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್ ಸ್ಕ್ರೀನ್ ಬಳಸುವುದು ಮುಖ್ಯ. ಕೀಟ ನಿವಾರಕವನ್ನು ಸಹ ಕೈಯಲ್ಲಿ ಇಟ್ಟುಕೊಂಡಿರಿ. ಇದರ ಜೊತೆಗೆ, ನೋವು ನಿವಾರಕಗಳು, ಆಂಟಿಹಿಸ್ಟಾಮೈನ್ಗಳು ಮತ್ತು ಅತಿಸಾರ ವಿರೋಧಿ ಮಾತ್ರೆಗಳಂತಹ ಮೂಲಭೂತ ಔಷಧಿಗಳನ್ನು ತೆಗೆದುಕೊಂಡು ಹೋಗುವುದು ಬಹಳ ಮುಖ್ಯ.