ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುವುದು ಒಂದು ಅದ್ಭುತವಾದ ಬಂಧ. ಈ ಸಂಬಂಧವು ಎರಡು ಜೀವಗಳನ್ನು ಒಟ್ಟಿಗೆ ಬೇಸೆಯುತ್ತದೆ. ಕೆಲವರು ಲವ್ ಮ್ಯಾರೇಜ್ ಆದರೆ, ಮತ್ತೆ ಕೆಲವರು ಕುಟುಂಬದವರ ಇಚ್ಛೆಯ ಮೇರೆಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮದುವೆ ಆಗಲು ನಿರ್ಧರಿಸುವಾಗ ಸಂಬಂಧದಲ್ಲಿಯೇ ಮದುವೆ ಆಗುವವರ ಸಂಖ್ಯೆ ಸಾಕಷ್ಟಿದೆ. ತಮ್ಮ ಮಗಳು ಪರಿಚಯಸ್ಥರ ಮನೆಗೆ ಸೊಸೆಯಾಗಿ ಹೋಗಬೇಕು ಅಥವಾ ತಮ್ಮ ಮನೆತನದಲ್ಲಿಯೇ ಪರಿಚಿತ ಹುಡುಗಿಯನ್ನು ತಮ್ಮ ಮಗನಿಗೆ ಪತ್ನಿಯಾಗಿ ತರಬೇಕೆಂದು ಎಷ್ಟೋ ಪೋಷಕರು ಬಯಸುತ್ತಾರೆ.
ಸಂಬಂಧದಲ್ಲಿ ಮದುವೆ ಆಗುವುದರಿಂದ ಎದುರಾಗುವ ಅಡ್ಡ ಪರಿಣಾಮಗಳ ಬಗ್ಗೆ ಕೆಲ ಮಂದಿಗೆ ತಿಳಿದಿಲ್ಲ. ಹಾಗಾಗಿ ಕೆಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲವಿದೆ. ಇನ್ನೂ ಅಂತಹವರಿಗೆ ಉತ್ತರವೆಂದರೆ, ಸಂಬಂಧದಲ್ಲಿ ಮದುವೆಯಾಗಬೇಡಿ, ಒಂದು ವೇಳೆ ಮದುವೆ ಆಗಿದ್ದರೆ ಏನು ಮಾಡಬೇಕು ಎಂದು ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಹತ್ತಿರದ ಸಂಬಂಧಿಯನ್ನು ಮದುವೆ ಆಗುವುದರಿಂದ ಜನಿಸಿದ ಮಗು ಕುಂಠಿತವಾಗಬಹುದು ಅಥವಾ ಮಗುವಿಗೆ ಥಲಸ್ಸೆಮಿಯಾ ಸೇರಿದಂತೆ ಇತರ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರ್ಯಾಂಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಮತ್ತು ಸರ್ ಜೆ. ಜೆ. ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಅಶೋಕ್ ಆನಂದ್ ಅವರು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಲವಾರು ರೋಗಗಳು ಬರುವ ಆತಂಕವಿದೆ. ಇದು ಸಾಮಾನ್ಯವಾಗಿ ಮಕ್ಕಳ ಐಕ್ಯೂ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇತರ ಮಕ್ಕಳಿಗಿಂತ ಕಡಿಮೆ ಐಕ್ಯೂ ಹೊಂದಿರುವ ಅಪಾಯವನ್ನುಂಟುಮಾಡುತ್ತದೆ.
ಥಲಸ್ಸೆಮಿಯಾ ಕಾಯಿಲೆ ಎಂದರೇನು?: ಥಲಸ್ಸೆಮಿಯಾ ಎಂಬುದು ಮಕ್ಕಳ ದೇಹದಲ್ಲಿನ ಕೆಂಪು ಕಣಗಳು ಸರಿಯಾಗಿ ಉತ್ಪತ್ತಿಯಾಗದೇ ಇರುವ ಕಾಯಿಲೆಯಾಗಿದ್ದು, ಈ ಜೀವಕೋಶಗಳ ಜೀವಿತಾವಧಿಯೂ ಕಡಿಮೆ ಇರುತ್ತದೆ. ಇದು ಒಂದು ರೀತಿಯ ರಕ್ತ ಅಸ್ವಸ್ಥತೆಯಾಗಿದ್ದು, ದೇಹದಲ್ಲಿ ರಕ್ತ ರಚನೆಯ ಪ್ರಕ್ರಿಯೆಯು ಅಡಚಣೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರೋಗಿಯ ದೇಹದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆಯು ಕಡಿಮೆಯಾಗುತ್ತದೆ ಮತ್ತು ಇದು ಹಿಮೋಗ್ಲೋಬಿನ್ ಮೇಲೆ ಪರಿಣಾಮ ಬೀರುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)