ಕೆಲವೊಮ್ಮೆ ಜೀವನದಲ್ಲಿ ನಮಗೆ ‘ಏನಪ್ಪಾ ಇದು, ಹೀಗೇಕೆ ಬದುಕುತ್ತಿದ್ದೇವೆ ನಾವು, ನಾವು ಬದುಕಬೇಕಾದ ಬದುಕು ಇದಲ್ಲ’ ಅಂತ ಅನ್ನಿಸಿರುತ್ತದೆ. ಹೌದು, ಪ್ರತಿಯೊಬ್ಬರಿಗೂ ಜೀವನದಲ್ಲಿ ಹೀಗೆ ಬದುಕಬೇಕೆಂಬ ಆಸೆ ಮತ್ತು ಬಯಕೆ ಇರುತ್ತದೆ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳ ಒತ್ತಡಕ್ಕೆ ಮಣಿದು ಜೀವನ ಹೇಗೆ ದಾರಿ ತೋರಿಸುತ್ತದೆಯೋ, ಆ ದಾರಿಯಲ್ಲಿ ನಾವು ಹೋಗಬೇಕಾಗಿ ಬರುತ್ತದೆ.
ಮುಂದೂಡುವಿಕೆ: ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ನಮ್ಮ ಕೆಲಸಗಳನ್ನು ಯಾವುದೋ ಒಂದು ಕಾರಣಕ್ಕೆ ಮುಂದೂಡುತ್ತಿರುತ್ತೇವೆ. ಎಂದರೆ ಕೆಲವೊಮ್ಮೆ ನಮಗೆ ಅವುಗಳನ್ನು ಮಾಡಲು ಮನಸ್ಸಿರದೆ ಮತ್ತು ಇನ್ನೂ ಕೆಲವೊಮ್ಮೆ ವಿನಾಕಾರಣ ಅವುಗಳನ್ನು ಮುಂದೂಡುತ್ತಿರುತ್ತೇವೆ. ಆದರೆ ಹೀಗೆ ಪ್ರಮುಖ ಕಾರ್ಯಗಳಿಂದ ತಪ್ಪಿಸಿಕೊಳ್ಳುವುದರಿಂದ ಅಥವಾ ವಿಳಂಬ ಮಾಡುವುದು ವಾಸ್ತವವಾಗಿ ಒತ್ತಡಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಪ್ರಗತಿಗೆ ಅಡ್ಡಿ ಸಹ ಆಗಬಹುದು.
ನಕಾರಾತ್ಮಕವಾಗಿ ಯೋಚಿಸುವುದು: ಈ ನಡುವಳಿಕೆ ನಮ್ಮಲ್ಲಿ ಬಹಳಷ್ಟು ಜನರು ಪ್ರತಿರೋಧಿಸಲು ಸಾಧ್ಯವಿಲ್ಲ. ಏಕೆಂದರೆ ಯೋಚನೆಗಳು ನಮ್ಮ ಮನಸ್ಸಿನಲ್ಲಿ ಮತ್ತು ತಲೆಯಲ್ಲಿ ಸದಾ ಕಾಲ ಓಡಾಡುತ್ತಲೇ ಇರುತ್ತವೆ. ಅದರಲ್ಲೂ ಸಾಕಾರಾತ್ಮಕ ಯೋಚನೆಗಳಿಗಿಂತ ನಕಾರಾತ್ಮಕ ಯೋಚನೆಗಳು ನಮ್ಮ ತಲೆಯಲ್ಲಿ ಹರಿದಾಡುವುದು ತುಂಬಾ ಅಂತ ಹೇಳಬಹುದು. ಯಾವುದೇ ಕೆಲಸವನ್ನು ಮಾಡುವ ಮೊದಲೇ "ನಾನು ಅದನ್ನು ಮಾಡಲು ಸಾಧ್ಯವಿಲ್ಲ", "ಇದು ತುಂಬಾ ಕಷ್ಟ", "ಇದು ಅಸಾಧ್ಯ", "ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಹೀಗೆ ಅನೇಕ ರೀತಿಯ ನಕಾರಾತ್ಮಕ ಚಿಂತನೆಗಳು ನಮ್ಮ ತಲೆಯನ್ನು ಆಕ್ರಮಿಸಿಕೊಳ್ಳುತ್ತವೆ ಮತ್ತು ಕೆಲಸ ಮಾಡುವುದನ್ನು ತಡೆಯುತ್ತವೆ.
ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ: ನಮಗೆ ನಮ್ಮ ಜೀವನದಲ್ಲಿ ಸೋಲಿನ ಭಯ ಸದಾ ಒಂದಲ್ಲ ಒಂದು ರೀತಿಯಿಂದ ಕಾಡುತ್ತಿರುತ್ತದೆ. ಹೀಗೆ ಇದು ನಮ್ಮ ಕೆಲಸಗಳ ಮೇಲೆ ಭಾರಿ ಪರಿಣಾಮ ಸಹ ಬೀರುತ್ತದೆ. ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಈ ಸೋಲು-ಗೆಲುವು ಎರಡು ಇದ್ದದ್ದೇ. ಸೋಲು ಗೆಲುವು ಎರಡು ಜೀವನದ ಸಾಮಾನ್ಯ ಅಂಶಗಳಾಗಿವೆ. ವೈಫಲ್ಯದ ಬಗ್ಗೆ ತುಂಬಾ ಭಯಪಡುವ ಬದಲು ವೈಫಲ್ಯದ ಸಾಧ್ಯತೆಯನ್ನು ಕಲಿಕೆಯ ಅವಕಾಶವಾಗಿ ನೋಡಲು ಪ್ರಯತ್ನಿಸಿ. ಜೀವನದಲ್ಲಿ ಇನ್ನಷ್ಟು ಉತ್ತಮವಾಗಲು ಮತ್ತು ಬೆಳೆಯಲು ನೀವು ಮಾಡಿರುವ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಿ. ಇದೆಲ್ಲವೂ ವೈಯಕ್ತಿಕ ಬೆಳವಣಿಗೆಗೆ ತುಂಬಾನೇ ಸಹಾಯ ಮಾಡುತ್ತದೆ.
ಇತರರೊಂದಿಗೆ ಹೋಲಿಸಿಕೊಳ್ಳುವುದು: ನಿಮ್ಮನ್ನು ಇತರ ಜನರೊಂದಿಗೆ ನಿರಂತರವಾಗಿ ಹೋಲಿಸುಕೊಂಡು ನೋಡುವುದಕ್ಕಿಂತಲೂ ನಿಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚು ಹಾನಿಕಾರಕವಾದುದು ಯಾವುದೂ ಇಲ್ಲ. ಪ್ರತಿಯೊಬ್ಬರೂ ವಿಭಿನ್ನರಾಗಿದ್ದಾರೆ ಮತ್ತು ನಾವೆಲ್ಲರೂ ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಹೊಂದಿದ್ದೇವೆ ಮತ್ತು ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಎಂದಿಗೂ ಒಳ್ಳೆಯದಲ್ಲ.
ನೆಪ ಹೇಳುವುದು: ತುಂಬಾ ಜನರು ವಿನಾಕಾರಣ ಸುಳ್ಳು ಹೇಳುವುದು, ನೆಪಗಳನ್ನು ಹೇಳುವುದು ಮಾಡುತ್ತಿರುತ್ತಾರೆ. ಆದರೆ ಇದು ತುಂಬಾ ಕೆಟ್ಟ ಅಭ್ಯಾಸ ಮತ್ತು ಇಂದೇ ನೀವು ಇದಕ್ಕೆ ಗುಡ್ ಬೈ ಹೇಳಿದರೆ ಒಳ್ಳೆಯದು. ನೆಪಗಳನ್ನು ಹೇಳುವುದು ನಿಮ್ಮ ಆಯ್ಕೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ ಮತ್ತು ನೀವು ಪ್ರಗತಿ ಸಾಧಿಸುವ ಹಾದಿಯಲ್ಲಿ ಅಡ್ಡ ಬರುತ್ತದೆ. ಆದ್ದರಿಂದ, ನೆಪ ಹೇಳುವುದನ್ನು ನಿಲ್ಲಿಸಿ ಮತ್ತು ಏನು ಮಾಡಬೇಕೋ ಅದನ್ನು ಮಾಡಿ ಮುಗಿಸಿ.