ಸೌಂದರ್ಯದಿಂದ ಹಿಡಿದು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಜನ ಅನೇಕ ಎಣ್ಣೆಗಳನ್ನು ಬಳಸುತ್ತಾರೆ. ಅರೋಮಾಥೆರಪಿ ಎಣ್ಣೆ, ಲ್ಯಾವೆಂಡರ್ ಎಣ್ಣೆ, ಕ್ಯಾಮೊಮೈಲ್ ಎಣ್ಣೆ, ರೋಸ್ಮರಿ ಎಣ್ಣೆಯಂತಹ ವಿವಿಧ ರೀತಿಯ ತೈಲಗಳು ಅರೋಮಾಥೆರಪಿ ಚಿಕಿತ್ಸೆಗೆ ಸಹಾಕಾರಿಯಾಗಿದೆ. ಕರಿಮೆಣಸಿನ ಎಣ್ಣೆ ಬಗ್ಗೆ ಅನೇಕ ಮಂದಿಗೆ ತಿಳಿದಿರುವುದಿಲ್ಲ. ಹೀಗಾಗಿ ಕರಿಮೆಣಸಿನ ಎಣ್ಣೆಯಿಂದ ಆಗುವ ಕೆಲವು ಪ್ರಯೋಜನಗಳನ್ನು ತಿಳಿಸೋಣ.
ಮೆಣಸಿನಲ್ಲಿ ಅನೇಕ ಪ್ರಯೋಜನಗಳಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ, ಇದು ರುಚಿಯನ್ನು ಹೆಚ್ಚಿಸುವುದಲ್ಲದೇ, ಶೀತ ಮತ್ತು ವಿವಿಧ ಕಾಯಿಲೆಗಳಿಂದ ಹಿಡಿದು ಅನೇಕ ರೋಗಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಕರಿಮೆಣಸನ್ನು ನಮ್ಮ ದೇಶದಲ್ಲಿ ವಿವಿಧ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಕರಿಮೆಣಸಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿವೆ. ಕಾಳುಮೆಣಸಿನಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಇದು ಹೆಚ್ಚಿನ ಆಹಾರಗಳಲ್ಲಿ ವಿರಳವಾಗಿ ಕಂಡುಬರುತ್ತದೆ. ಕರಿಮೆಣಸು ಎಣ್ಣೆಯಿಂದ ಅದ್ಭುತವಾದಂತಹ ಪ್ರಯೋಜನಗಳಿದೆ.
ಸ್ನಾಯು ಸೆಳೆತ: ಕಾಳುಮೆಣಸು ದೇಹದ ಭಾಗಗಳ ಮೇಲೆ ಬೆಚ್ಚಗಿನ ಪರಿಣಾಮವನ್ನು ಬೀರುತ್ತದೆ. ಜೊತೆಗೆ ಮೆಣಸಿನ ಎಣ್ಣೆಯನ್ನು ನೋವು ಮತ್ತು ಊತಕ್ಕೆ ಬಳಸಬಹುದು. ಏಕೆಂದರೆ ಇದು ಆಂಟಿಸ್ಪಾಸ್ಮೊಡಿಕ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಸ್ನಾಯು ಸೆಳೆತದ ನೋವಿಗೆ ಪರಿಹಾರವನ್ನು ನೀಡುತ್ತದೆ. ಕೀಲು ನೋವು, ಊತ ಮತ್ತು ವಾತ ನೋವಿನಿಂದ ಬಳಲುತ್ತಿರುವವರು ಇದನ್ನು ನೋವು ಮತ್ತು ಊತಕ್ಕೆ ಬಳಸಬಹುದು.
ಒತ್ತಡ, ಆಯಾಸ: ಈ ಎಣ್ಣೆಯು ಔಷಧೀಯ ಗುಣಗಳನ್ನು ಹೊಂದಿದ್ದು, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಜೊತೆಗೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮೆಣಸಿನ ಎಣ್ಣೆಯು ರೋಗಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಈ ಎಣ್ಣೆ ಸ್ವಲ್ಪ ಸ್ಟ್ರಾಂಗ್ ಆಗಿರುವುದರಿಂದ ಕೆಲವರಿಗೆ ಕಷ್ಟವಾಗುತ್ತದೆ. ನರಗಳ ನೋವನ್ನು ಕಡಿಮೆ ಮಾಡಲು ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.