ಅಮೆರಿಕದ ವಾಷಿಂಗ್ಟನ್ನಲ್ಲಿರುವ ಸಿಯಾಟಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಪೋಷಕರು ಫೇಸ್ಬುಕ್, ಟಿಕ್ ಟಾಕ್, ಇನ್ಸ್ಟಾಗ್ರಾಮ್ ಮತ್ತು ಸ್ನ್ಯಾಪ್ ಚಾಟ್ ಪ್ಲಾಟ್ಫಾರ್ಮ್ಗಳನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಜಿಲ್ಲಾ ಫೆಡರಲ್ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಪ್ರಯೋಜನಕ್ಕಿಂತ ಹೆಚ್ಚು ಹಾನಿ ಮಾಡುತ್ತವೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ.
ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಕ್ಕಳಿಗೆ ಸರಿಯಾದ ವಿವೇಚನೆ ಇಲ್ಲ. ಎಷ್ಟು ಬಳಸಬೇಕು? ಯಾವುದನ್ನು ನೋಡಬೇಕು? ಎನ್ನುವುದರ ಬಗ್ಗೆ ತಿಳುವಳಿಕೆ ಇಲ್ಲ. ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗುತ್ತಾರೆ. ಜೊತೆಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯದಿದ್ದರೆ ಆತಂಕಕ್ಕೆ ಒಳಗಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ದೇಹದಲ್ಲಿ ಅಸಹಜ ಬದಲಾವಣೆ: ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಪ್ರೀತಿ ಸಿಂಗ್ ಅವರು ಹೇಳುವ ಪ್ರಕಾರ, ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಪೋಷಕರಿಗೆ ತಿಳಿದಿರುವುದಿಲ್ಲ. “ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ, ಅವರು ಚೆನ್ನಾಗಿದ್ದಾರೆ ಎಂದು ಅವರು ಭಾವಿಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಬಳಕೆ ಕ್ರಮೇಣ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ಪ್ರೀತಿ ಸಿಂಗ್ ಬಹಿರಂಗಪಡಿಸಿದ್ದಾರೆ.
ಅಸ್ವಸ್ಥತೆಗೆ ಕಾರಣವಾಗಬಹುದು: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಭವಿಷ್ಯದಲ್ಲಿ ಅನೇಕ ಅಸ್ವಸ್ಥತೆಗಳು ಉಂಟಾಗಬಹುದು ಎಂದು ಮಕ್ಕಳ ತಜ್ಞ ಡಾ. ಸಿ.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ತೀವ್ರ ಆತಂಕ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯಿಂದ ಮಕ್ಕಳನ್ನು ದೂರವಿರಿಸಲು ಪೋಷಕರು ವಿವಿಧ ವಿಧಾನಗಳನ್ನು ಅನುಸರಿಸಬೇಕು. ಮಕ್ಕಳೊಂದಿಗೆ ಹಾಡುಗಳನ್ನು ಹಾಡುವುದು, ಚಿತ್ರಗಳನ್ನು ಬಿಡಿಸುವುದು ಮತ್ತು ಆಟವಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.
ಮೊದಲು ಪೋಷಕರು ಮಾಡಬೇಕು: ಹೇಳುವುದಕ್ಕಿಂತ ಮಾಡಿ ತೋರಿಸುವುದು ಉತ್ತಮ. ಆದ್ದರಿಂದ, ಪೋಷಕರು ಮೊದಲು ಈ ಕ್ರಮ ತೆಗೆದುಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಿ, ಮಕ್ಕಳಿಗೆ ಸೂಚನೆ ನೀಡಬೇಕು. ಊಟದ ಸಮಯದಲ್ಲಿ ಫೋನ್ ಅನ್ನು ಪಕ್ಕಕ್ಕೆ ಇರಿಸಿ. ಸಾಮಾಜಿಕ ಜಾಲತಾಣಗಳ ಬಳಕೆಗೆ ಸಮಯ ಮೀಸಲಿಡಬೇಕು. ಆ ಸಮಯಗಳನ್ನು ಹೊರತುಪಡಿಸಿ ಇತರ ಸಮಯಗಳಲ್ಲಿ ಸೋಶಿಯಲ್ ಮೀಡಿಯಾ ನೋಡಬೇಡಿ. ಮಕ್ಕಳು ಇದೇ ಅಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು.
ಮೊಬೈಲ್ಗಳಲ್ಲಿ 'Parent Controls' ಆಯ್ಕೆಯನ್ನು ಸಕ್ರಿಯಗೊಳಿಸಿ. ಇಲ್ಲದಿದ್ದರೆ ಮಕ್ಕಳು ಪೋರ್ನ್ ನಂತಹ ವಿಷಯದ ಕಡೆ ವಾಲುವ ಅಪಾಯವಿದೆ. ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬೇಕು ಎಂಬುದನ್ನು ಮಕ್ಕಳಿಗೆ ಸಕಾರಾತ್ಮಕವಾಗಿ ತಿಳಿಸಬೇಕು. ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಏನು ಬೇಕಾದರೂ ನಾವಿದ್ದೇವೆ ಎಂಬ ಭರವಸೆ ಮೂಡಿಸಬೇಕು. ಅವರೊಂದಿಗೆ ಸ್ವಲ್ಪ ಎಂಜಾಯ್ ಮಾಡಿ. ಸಾಮಾಜಿಕ ಮಾಧ್ಯಮದ ಮಾರ್ಗಸೂಚಿಗಳನ್ನು ಅನುಸರಿಸಿ.