ಬೇಸಿಗೆ ಕಾಲ ಆರಂಭವಾಗಿದೆ. ಬಿಸಿಲಿನ ಬೇಗೆಗೆ ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿಗಳು ದಂಗಾಗಿ ಹೋಗಿವೆ. ಅದರಲ್ಲೂ ನಾಯಿಮರಿಗಳು ಬೇಸಿಗೆಯಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತವೆ. ತಾಪಮಾನದ ಏರಿಕೆಯಿಂದ ಹಸಿವು ಕೂಡ ಕಡಿಮೆಯಾಗಬಹುದು. ಹಾಗಾಗಿ ಈ ಕಾಲದಲ್ಲಿ ನಾಯಿಮರಿಗಳಿಗೆ ಸೂಕ್ತ ಡಯೆಟ್ ಕ್ರಮ ಅನುಸರಿಸುವ ಜೊತೆಗೆ, ದೇಹವನ್ನು ತಂಪಾಗಿರುವಂತೆ ನೋಡಿಕೊಳ್ಳುವುದು ಸಹ ಮುಖ್ಯ.
ನೀರು ಕುಡಿಸುತ್ತಿರಬೇಕು: ತಾಪಮಾನ ಏರಿಕೆಯಾದ ತಕ್ಷಣ ನಿಮ್ಮ ಮನೆಯ ಮುದ್ದು ನಾಯಿಮರಿಗೆ ಬಾಯಾರಿಕೆ ಜಾಸ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಮಟ್ಟದ ನೀರನ್ನು ಕುಡಿಸಬೇಕು. ಸ್ವಚ್ಛ ಹಾಗೂ ತಾಜಾ ನೀರು ಅದರ ಗೂಡಿನಲ್ಲಿ ಬಾಯಿಗೆ ಸಿಗುವಂತೆ ಇರಿಸಬೇಕು. ಇದರಿಂದ ಅವುಗಳಿಗೆ ದೇಹಕ್ಕೆ ಆಯಾಸವಾಗುವುದಿಲ್ಲ. ಅಲ್ಲದೆ ದೇಹದ ತಾಪಮಾನವನ್ನು ನಿಯಂತ್ರಿಸಲು ಹಾಗೂ ಶಕ್ತಿ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹ ಸಾಧ್ಯವಾಗುತ್ತದೆ.
ನೀರಿನಂಶ ಹೆಚ್ಚಿರುವ ಆಹಾರಗಳನ್ನು ನೀಡಿ: ತಾಪಮಾನ ಹೆಚ್ಚಾದಾಗ ನಾಯಿಗಳಿಗೆ ಹಸಿವು ಆಗುವುದು ಕಡಿಮೆ. ಹಾಗಾಗಿ ತಾಜಾ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ನೀಡಿ. ಆದರೆ ಪೋಷಕಾಂಶಯುಕ್ತ ಆಹಾರಗಳನ್ನು ಆಗಾಗ ನೀಡಬೇಕು. ಇದರಿಂದ ಅವುಗಳ ಆರೋಗ್ಯ ಸ್ಥಿರವಾಗಿರುತ್ತದೆ. ಕಡಿಮೆ ಕ್ಯಾಲೊರಿ ಇರುವ, ನೀರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ನೀಡುವುದರಿಂದ ನಾಯಿಮರಿಗಳು ಆರೋಗ್ಯವಾಗಿರುವಂತೆ ಮಾಡ್ಬಹುದು..
ನಾಯಿಗಳನ್ನು ಕಟ್ಟುವ ಜಾಗ: ನಾಯಿಮರಿಗಳಿಗೆ ಆಹಾರ ನೀಡುವ ಮೊದಲು ಆಹಾರ ಇರಿಸುವ ಜಾಗವನ್ನು ನೋಡಿಕೊಳ್ಳಬೇಕು. ಜೊತೆಗೆ ನಾಯಿಗಳನ್ನು ಯಾವತ್ತೂ ಬೇಸಿಗೆಯ ಸಮಯದಲ್ಲಿ ಬಿಸಿಲಿನಲ್ಲಿ ಕಟ್ಟಬಾರದು. ಈ ಸಮಯದಲ್ಲಿ ಬೇರೆ ಎಲ್ಲಾದರು ನಾಯಿಯನ್ನು ಕಟ್ಟುವಾಗ, ಆ ಜಾಗದ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕು. ಬಿಸಿಲು ನೇರವಾಗಿ ಬೀಳುವ ಕಡೆ ಆಹಾರ ನೀಡಬಾರದು. ಸಾಧ್ಯವಾದಷ್ಟು ತಂಪಿರುವ ಜಾಗದಲ್ಲಿ ಆಹಾರ ನೀಡಿ.
ಪೌಷ್ಠಿಕ ಆಹಾರಗಳನ್ನು ನೀಡಿ: ಟರ್ಕಿ ಕೋಳಿ, ಮೊಲದ ಮಾಂಸಗಳು, ಬಾತುಕೋಳಿ ಮೊಟ್ಟೆ, ಮೀನು, ಮೊಟ್ಟೆ, ಮೊಸರು ಇವುಗಳನ್ನು ಬೇಸಿಗೆಯಲ್ಲಿ ನಾಯಿಗಳಿಗೆ ನೀಡುವುದರಿಂದ ಆರೋಗ್ಯವಾಗಿರುತ್ತದೆ. ಈ ರೀತಿಯ ಆಹಾರಗಳು ಪ್ರಾಣಿಗಳ ದೇಹವನ್ನು ತಂಪು ಮಾಡುತ್ತವೆ. ಮಾಂಸದೊಂದಿಗೆ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕೋಸುಗೆಡ್ಡೆ, ಸೆಲರಿ, ಸೌತೆಕಾಯಿ, ಸೊಪ್ಪು, ಹಸಿರುಬಟಾಣಿ, ಕಲ್ಲಂಗಡಿ, ಸ್ಟ್ರಾಬೆರಿ, ಕರ್ಜೂರ ಇಂತಹ ಹಣ್ಣು, ತರಕಾರಿಗಳು ದೇಹವನ್ನು ತಂಪು ಮಾಡುವ ಜೊತೆಗೆ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಸಹ ಒದಗಿಸುತ್ತವೆ.