ಮುಖ್ಯವಾಗಿ ಬೆನ್ನು ನೋವು ತೀವ್ರಗೊಂಡರೆ ಕಚೇರಿಯ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ವೈಯಕ್ತಿಕ ಜೀವನವನ್ನು ಸಂತೋಷದಿಂದ ಕಳೆಯಲು ದೊಡ್ಡ ಅಡ್ಡಿಯಾಗುತ್ತದೆ. ಅಲ್ಲದೇ ಬೆನ್ನು ನೋವನ್ನು ಹೋಗಲಾಡಿಸಲು ಅನೇಕ ಮಂದಿ ನೋವು ನಿವಾರಕಗಳನ್ನು ಸೇವಿಸುತ್ತಾರೆ. ಆದರೆ ಇದು ಕೂಡ ಶಾಶ್ವತ ಪರಿಹಾರವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವು ವಿಚಾರಗಳನ್ನು ಅನುಸರಿಸುವ ಮೂಲಕ ದೀರ್ಘಕಾಲದ ಬೆನ್ನು ನೋವನ್ನು ತಡೆಗಟ್ಟಬಹುದು. ಆದರೆ ಬೆನ್ನು ನೋವು ಬರಲು ಕಾರಣವೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬುವುದಕ್ಕೆ ಈ ಕೆಳಗೆ ನೀಡಿರುವ ಟಿಪ್ಸ್ ಫಾಲೋ ಮಾಡಿ.
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು: ನಮ್ಮ ದೇಹದಲ್ಲಿ ಸಾಕಷ್ಟು ಜಲಸಂಚಯನವು ನಮ್ಮ ಕೀಲುಗಳ ಘರ್ಷಣೆಯನ್ನು ಮೃದುಗೊಳಿಸಲು ಮತ್ತು ಕೀಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಅಂದರೆ ನೀರಿನಾಂಶ ಕಡಿಮೆಯಾದರೆ ಕೀಲುಗಳಲ್ಲಿ ಘರ್ಷಣೆ ಹೆಚ್ಚುತ್ತದೆ ಮತ್ತು ದೀರ್ಘಾವಧಿ ಕೀಲು ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ನೀರಿನ ಬಾಟಲಿಯನ್ನು ಸಾಧ್ಯವಾದಷ್ಟು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಮತ್ತು ನಿಮಗೆ ಅಗತ್ಯವಿರುವಷ್ಟು ನೀರನ್ನು ನಿಯಮಿತವಾಗಿ ಕುಡಿಯುವುದು ಪ್ರಯೋಜನಕಾರಿ ಆಗಿದೆ.
ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದು: ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವ ವ್ಯಕ್ತಿಯಾಗಿದ್ದರೆ ಖಂಡಿತವಾಗಿಯೂ ನಿಮಗೆ ಬೇಗನೆ ಬೆನ್ನು ನೋವು ಬರುತ್ತದೆ. ಅದರಲ್ಲೂ ಕಛೇರಿಗಳಲ್ಲಿ ಕೆಲಸ ಮಾಡುವಾಗ ಬಹಳಷ್ಟು ಮಂದಿಗೆ ಸಿಹಿತಿಂಡಿಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಹೆಚ್ಚುವರಿ ಸಕ್ಕರೆ ದೇಹದಲ್ಲಿ ಸಂಗ್ರಹವಾದಾಗ, ಅದು ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವುದನ್ನು ತಡೆಯುತ್ತದೆ.
ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು : ಎಲ್ಲಿಯೂ ಕದಲದೇ ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು ಖಂಡಿತವಾಗಿಯೂ ಬರುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ವಿರಾಮಗಳಲ್ಲಿ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ಪ್ರತಿ 45 ನಿಮಿಷಗಳಿಗೊಮ್ಮೆ ಕನಿಷ್ಠ 10 ನಿಮಿಷಗಳ ದೈಹಿಕ ಚಟುವಟಿಕೆಯು ಬೆನ್ನುನೋವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಲಭ್ಯವಿರುವ ವಿರಾಮಗಳಲ್ಲಿ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡುವುದರಿಂದ ನಮ್ಮ ಸ್ನಾಯುಗಳನ್ನು ಉತ್ತಮವಾಗಿ ಹಿಗ್ಗಿಸುತ್ತದೆ ಮತ್ತು ಬೆನ್ನು ನೋವನ್ನು ತಡೆಯುತ್ತದೆ.