ಸಾಮಾನ್ಯವಾಗಿ ಹರೆಯದಲ್ಲಿ ಪ್ರೀತಿಸುತ್ತಿದ್ದವರೊಂದಿಗೆ ಯಾರಾದರೂ ಮಾತನಾಡಿದರೆ ಅಪನಂಬಿಕೆ, ಅಸೂಯೆ ಹುಟ್ಟುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಒಂದು ಕಾರಣ ಅವರ ಮೇಲೆ ನೀವಿಟ್ಟಿರುವ ವಿಪರೀತ ಒಲವು. ಅದೇ ಇನ್ನೊಂದು ಅರ್ಥದಲ್ಲಿ ಹೇಳಿದರೆ ಅದುವೇ ಅವಿಶ್ವಾಸ. ಹೌದು, ನಿಮ್ಮ ಸಂಗಾತಿ ಕೈ ತಪ್ಪಬಹುದೆಂಬ ಭಯ, ನನಗಿಂತ ಅವರನ್ನೇ ಹೆಚ್ಚು ಇಷ್ಟಪಡುತ್ತಾರೆ ಎಂಬ ಸಂಶಯ...ಹೀಗೆ ನಾನಾ ಕಾರಣಗಳಿಂದ ಅಪನಂಬಿಕೆ ಮೂಡಬಹುದು.
ಪ್ರೀತಿ ಎಂಬುದು ನಂಬಿಕೆಯ ಮೇಲೆ ನಿಂತಿರುವ ಒಂದು ಭಾವನಾತ್ಮಕ ಅನುಭವ. ಇಲ್ಲಿ ನಿಮ್ಮ ಸಂಗಾತಿ ಆತನ/ಆಕೆಯ ಸ್ನೇಹಿತರ ಬಗ್ಗೆ , ಕಾಲೇಜು ಜೀವನದ ಬಗ್ಗೆ ಮತ್ತು ಮಾಜಿ ಪ್ರಿಯತಮ/ಪ್ರಿಯತಮೆ ಬಗ್ಗೆ ಹೇಳಿಕೊಂಡರು ನಿಮ್ಮಲ್ಲೂ ಸಣ್ಣದಾಗಿ ಸಂಶಯದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ನಿಮ್ಮದೊಂದಿಗೆ ಇಂತಹ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರೆ ಆಕೆ/ಆತನಿಗೆ ನಿಮ್ಮ ಮೇಲೆ ಅಷ್ಟೊಂದು ನಂಬಿಕೆ ಇದೆ ಎಂದೇ ಅರ್ಥ. ಅಲ್ಲದೆ ಅವರ ಜೀವನದಲ್ಲಿ ನಿಮಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಮನೆ, ಕುಟುಂಬ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಒಂದು ವೇಳೆ ನೀವು ಹೇಳದೆ ಮಾಡಿದರೆ ಮುಂದೊಂದು ಅದು ಬಹಿರಂಗವಾಗುತ್ತದೆ. ಇದು ಅನುಮಾನಕ್ಕೆ ಕಾರಣವಾಗುತ್ತದೆ. ಹಾಗೆಯೇ ನಿಮ್ಮ ನಿರ್ಧಾರಗಳನ್ನು ತಿಳಿಸಿದಾಗ ಅವರು ಹೇಳುವ ಸಲಹೆಗಳನ್ನು ಸ್ವೀಕರಿಸಿ. ಏಕೆಂದರೆ ನೀವು ಉತ್ತಮ ಸ್ಥಾನದಲ್ಲಿರಬೇಕೆಂದು ಬಯಸುವವರಲ್ಲಿ ಅವರು ಕೂಡ ಒಬ್ಬರು.
ಮಾತನ್ನು ಮಧ್ಯೆದಲ್ಲೇ ನಿಲ್ಲಿಸದಿರಿ. ಅನೇಕರ ಜೀವನದಲ್ಲಿ ಇದುವೇ ದೊಡ್ಡ ಅನುಮಾನಕ್ಕೆ ಕಾರಣವಾಗುತ್ತದೆ. ಸಂಗಾತಿಯೊಂದಿಗೆ ಪ್ರತಿಯೊಂದು ವಿಷಯವನ್ನು ತಿಳಿಸುವಾಗಲೂ ಸಂಪೂರ್ಣ ವಿವರಿಸಿ ಹೇಳಲು ಪ್ರಯತ್ನಿಸಿ. ಪತಿ/ಪತ್ನಿ ಹೇಳುವ ಇಂತಹ ವಿಷಯಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಪಯತ್ನಿಸಿ. ಇದರಿಂದ ಕೂಡ ಅಪನಂಬಿಕೆ ದೂರವಾಗುತ್ತದೆ. ಹಾಗೆಯೇ ನಿಮ್ಮ ಜೀವನ ಸುಧಾರಣೆಗೂ ಇದು ಕಾರಣವಾಗುತ್ತದೆ.
ಸಂಗಾತಿಯು ನಿಮ್ಮೊಂದಿಗಿನ ಸಂಬಂಧಕ್ಕೂ ಮೊದಲು ಅಥವಾ ಪಾರ್ಟನರ್ ಆದ ಬಳಿಕ ಅವರು ಮಾಡಿದ್ದ ತಪ್ಪುಗಳನ್ನು ಹಂಚಿಕೊಳ್ಳುತ್ತಾರೆ. ಇದರರ್ಥ ಅವರು ಕೆಟ್ಟವರು ಅಲ್ಲ. ಬದಲಾಗಿ ನಿಮ್ಮೊಂದಿಗೆ ಯಾವುದನ್ನು ಮರೆಮಾಚಲು ಬಯಸುತ್ತಿಲ್ಲ ಎಂಬುದಾಗಿದೆ. ಅವರಿಗೆ ಮಾಡಿದ ತಪ್ಪಿನ ಬಗ್ಗೆ ವಿಷಾದವಿದೆ. ನಿಮ್ಮ ಮೇಲಿನ ಪ್ರೀತಿಯಿಂದ ಹೇಳಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೋಪಗೊಳ್ಳದೇ ಅವರೊಂದಿಗೆ ಪ್ರೀತಿಯಿಂದ ಇರಿ. ಇದರಿಂದ ಇಬ್ಬರ ನಡುವಿನ ಸಂಶಯ ದೂರವಾಗುತ್ತದೆ.
ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ದೈನಂದಿನ ಜೀವನದಲ್ಲಿ ಮತ್ತು ಸಂಬಂಧಗಳ ವಿಷಯದಲ್ಲೂ ಇದು ನಡೆಯಬಹುದು. ಈ ವೇಳೆ ನಿಮ್ಮ ಸಂಗಾತಿ ತಪ್ಪುಗಳ ಬಗ್ಗೆ ಕೋಪಗೊಳ್ಳದಿದ್ದರೆ ಅಥವಾ ಮಾತನಾಡದಿದ್ದರೆ, ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರ್ಥವಲ್ಲ. ಬದಲಾಗಿ, ಅವರಿಗೆ ನೋವಾಗಿದೆ. ನಿಮ್ಮ ಮೇಲಿನ ನೋವು ಅನುಮಾನಗಳನ್ನು ಹುಟ್ಟುಹಾಕುತ್ತಿರುತ್ತದೆ. ಹಾಗಾಗಿ ಅವರು ಮಾತನಾಡದಿದ್ದರೂ ನೀವೇ ಖುದ್ದು ಮಾತನಾಡಿಸಿ ಪ್ರೀತಿಯಿಂದ ಗೆಲ್ಲಲು ಪ್ರಯತ್ನಿಸಿ.
ನೀವು ಎಲ್ಲೇ ಹೋದರು, ನಿಮ್ಮ ಸಂಗಾತಿ ಪ್ರತಿ ಬಾರಿ ಕರೆ ಮಾಡಿ ವಿಚಾರಿಸುತ್ತಿದ್ದರೆ ಅದನ್ನು ಸಂಶಯ ಎಂದು ಪರಿಗಣಿಸದಿರಿ. ಅದು ಕೂಡ ಪ್ರೀತಿಯ ಮತ್ತೊಂದು ಮಜಲು. ನಿಮ್ಮ ಬಗ್ಗೆಗಿನ ವಿಪರೀತ ಕಾಳಜಿಯಿಂದ ಅವರು ನಿಮಗೆ ನಿರಂತರ ಕರೆ ಮಾಡುತ್ತಿರಬಹುದು. ಇಂತಹ ವೇಳೆ ನೀವೇ ಡೌಟ್ ಪಡುತ್ತಿದ್ದಾರೆ ಎಂಬ ನಿರ್ಧಾರಕ್ಕೆ ಬರದಿರಿ. ಪ್ರೀತಿಯಿಂದಲೇ ಪರಿಸ್ಥಿತಿ ಬಗ್ಗೆ ತಿಳಿ ಹೇಳಿ ಅವರನ್ನು ಮೆಚ್ಚಿಸಿ.