Blurred Vision: ಇದು ಮಧುಮೇಹದ ಅತ್ಯಂತ ಆರಂಭಿಕ ಲಕ್ಷಣ. ಮೊದಲೇ ದೃಷ್ಟಿ ಸಮಸ್ಯೆ ಇದ್ದವರು ಕಣ್ಣು ಮಂಜಾದಾಗ ತಮ್ಮ ಪವರ್ ನಲ್ಲಿ ವ್ಯತ್ಯಾಸವಾಗಿದೆ ಎಂದುಕೊಂಡು ಸುಮ್ಮನಿರುವ ಸಾಧ್ಯತೆ ಇರುತ್ತದೆ. ಆದರೆ ಹಾಗೆ ಮಾಡದೆ ನೇರವಾಗಿ ವೈದ್ಯರನ್ನು ಕಾಣಬೇಕು. ನೇತ್ರತಜ್ಞರು ರಕ್ತದಲ್ಲಿನ ಸಕ್ಕರೆ ಅಂಶದ ಪರೀಕ್ಷೆಯನ್ನು ಮಾಡಲು ತಿಳಿಸುತ್ತಾರೆ. ಇದರಿಂದ ಖಂಡಿತವಾಗಿ ಮಧುಮೇಹವಿದ್ದರೆ ಆರಂಭದಲ್ಲೇ ತಿಳಿಯಬಹುದು.
ವಿಪರೀತ ಮೂತ್ರವಿಸರ್ಜನೆ: ಹೆಚ್ಚು ನೀರು ಕುಡಿದಿದ್ದೇವೆ ಹಾಗಾಗಿ ಹೆಚ್ಚು ಮೂತ್ರವಿಸರ್ಜನೆ ಆಗುತ್ತಿದೆ ಎಂದುಕೊಂಡು ಅನೇಕರು ಈ ಲಕ್ಷಣವನ್ನು ಗಮನಿಸುವುದಿಲ್ಲ. ಒಂದೆರಡು ದಿನ ನಿಜವಾಗಲೂ ನೀವು ಜಾಸ್ತಿ ನೀರು ಕುಡಿದಿದ್ದಕ್ಕೇ ಹೀಗಾಗಬಹುದು. ಆದ್ರೆ ನಿರಂತರವಾಗಿ ಹೀಗಾದಾಗ ಇದು ಮಧುಮೇಹದ ಆರಂಭ ಎಂದೇ ತಿಳಿಯಬೇಕು. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಹೆಚ್ಚು ನೀರು ಬಿಡುಗಡೆಯಾಗುತ್ತದೆ. ಆಗ ಮೂತ್ರಪಿಂಡದ ಮೇಲೆ ಹೆಚ್ಚಿನ ಒತ್ತಡ ಉಂಟಾದಾಗ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕು ಎನಿಸುವುದು ಸಹಜ. ದಿನಕ್ಕೆ ಐದಾರು ಬಾರಿಗಿಂತ ಹೆಚ್ಚು ಸಲ ಮೂತ್ರವಿಸರ್ಜನೆ ಮಾಡುತ್ತಿದ್ದರೆ ಖಂಡಿತಾ ಒಮ್ಮೆ ಡಯಾಬಿಟಿಸ್ ಟೆಸ್ಟ್ ಮಾಡಿಸಿಕೊಳ್ಳಿ.
ಚರ್ಮ ಕಪ್ಪಾಗುವಿಕೆ: ಕುತ್ತಿಗೆ, ಕಂಕಳು, ಮಂಡಿಯ ಹಿಂಭಾಗದಲ್ಲಿ ಚರ್ಮ ಕಪ್ಪಗಾಗಿದೆಯಾ ಗಮನಿಸಿ. ಎಲ್ಲಾ ವಯಸ್ಸಿನವರಲ್ಲೂ ಇದು ಸರ್ವೇ ಸಾಮಾನ್ಯವಾಗಿ ಕಂಡುಬರುವ ಲಕ್ಷಣ. ಆದರೆ ಬಿಸಿಲಿನಲ್ಲಿ ಕೆಲಸ ಮಾಡುತ್ತೇವೆ ಎಂದೋ, ವಯಸ್ಸಾಗಿದೆ ಎಂದೋ ಈ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಆದ್ರೆ ಚರ್ಮ ಕಪ್ಪಾಗುವಿಕೆ ಮಧುಮೇಹದ ಲಕ್ಷಣಗಳಲ್ಲೊಂದು. ಇದನ್ನು ಗಮನಿಸಿ ಪರೀಕ್ಷಿಸಿಕೊಂಡರೆ ಮಧುಮೇಹದಿಂದ ನಂತರ ಆಗಬಹುದಾದ ಎಲ್ಲಾ ಅಪಾಯಗಳನ್ನೂ ಮೊದಲೇ ಗುರುತಿಸಿ ಚಿಕಿತ್ಸೆ ಪಡೆಯಬಹುದು.