ಇಂದು ದೇಶಾದ್ಯಂತ 'ಛತ್ ಪೂಜೆ'ಯನ್ನು ಆಚರಿಸಲಾಗುತ್ತಿದೆ. ಭೂಮಿಯ ಮೇಲೆ ಜೀವನ ನಡೆಸಲು ಜಗತ್ತಿಗೆ ಬೆಳಕು ನೀಡಿ ಕರುಣಿಸುತ್ತಿರುವ ಸೂರ್ಯ ದೇವರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಛತ್ ಪೂಜೆಯನ್ನು ಆಚರಿಸುತ್ತಾರೆ. ಛತ್ ಪೂಜೆಯನ್ನು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿಶೇಷವಾಗಿ ಬಿಹಾರ ಮತ್ತು ನೇಪಾಳದ ಮಿಥಿಲಾದಲ್ಲಿ ಆಚರಿಸುತ್ತಾರೆ. ಭಕ್ತಾದಿಗಳು ಕಠಿಣ ವ್ರತಗಳನ್ನು ಪಾಲಿಸುವ ಮೂಲಕ ಈ ಹಬ್ಬವನ್ನು 4 ದಿನಗಳ ಕಾಲ ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಸೂರ್ಯ ದೇವರನ್ನು ವೈದ್ಯರು ಎಂದು ನಂಬಲಾಗಿದೆ. ಕಠಿಣ ವ್ರತ, ಉಪವಾಸ, ಜಲ ವ್ರತ(ನೀರು ಕುಡಿಯದೇ ಇರುವುದು) ಮಾಡಲಾಗುತ್ತದೆ. ಪವಿತ್ರ ಸ್ನಾನ, ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ಪ್ರಾರ್ಥನೆ ಮಾಡಲಾಗುತ್ತದೆ. ಸೂರ್ಯನು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ. ಸೂರ್ಯ ದೇವರ ಕೃಪೆಯಿಂದ ದೀರ್ಘಾಯುಷ್ಯ, ಅಭಿವೃದ್ಧಿ, ಪ್ರಗತಿ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನದಿ, ಸರೋವರಗಳಲ್ಲಿ ನಿಂತು ದೀರ್ಘ ಕಾಲ ಧ್ಯಾನ ಮಾಡುವ ಮುಂತಾದ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ.