ಪ್ರೈಮರ್, ಫೌಂಡೇಶನ್, ಕನ್ಸೀಲರ್, ಪೌಡರ್, ಅಂಡರ್ ಐ ಉತ್ಪನ್ನಗಳು, ಪಟ್ಟಿ ಮುಂದುವರಿಯುತ್ತದೆ. ಆದರೆ ಈ ಉತ್ಪನ್ನಗಳು ಚರ್ಮದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಮೇಕಪ್ ಉತ್ಪನ್ನಗಳು ದಿನನಿತ್ಯ ಬಳಸಿದಾಗ ಕೆಲವೊಮ್ಮೆ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದಕ್ಕೆ ಕಾರಣ ಅದರಲ್ಲಿರುವ ರಾಸಾಯನಿಕಗಳು. ಹಾಗಾಗಿ ಮೇಕಪ್ ಇಲ್ಲದೆಯೇ ಸುಂದರ ನೋಟವನ್ನು ಪಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.
ವರ್ಕೌಟ್
ವಾರದಲ್ಲಿ ಕನಿಷ್ಠ 3-4 ಗಂಟೆಗಳ ಕಾಲ ವರ್ಕೌಟ್ ಮಾಡುವುದು ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಚರ್ಮದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈನಂದಿನ ದೈಹಿಕ ಚಟುವಟಿಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಸರಬರಾಜು ಮಾಡುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ.
ತ್ವಚೆಯ ಆರೈಕೆ ದಿನಚರಿ
ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರಿಸಿಕೊಳ್ಳಲು ನೀವು ಪ್ರತಿದಿನ ನಿಮ್ಮ ಚರ್ಮಕ್ಕೆ ಸೂಕ್ತವಾದ ತ್ವಚೆಯ ಆರೈಕೆಯ ಕ್ರಮ ಅನುಸರಿಸಬೇಕು. ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ನಿಮ್ಮ ತ್ವಚೆಯ ಆರೈಕೆಯಲ್ಲಿ ಉತ್ಪನ್ನಗಳನ್ನು ಆಯ್ಕೆಮಾಡಿ ಮತ್ತು ಬಳಸಿ. ಕಠಿಣ ರಾಸಾಯನಿಕಗಳಿಂದ ಮುಕ್ತವಾಗಿರುವ ಚರ್ಮದ ಆರೈಕೆ ಉತ್ಪನ್ನಗಳನ್ನು ಆರಿಸಿ. ಮಲಗುವ ಮುನ್ನ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಕೊಳ್ಳಿ
ಸನ್ ಸ್ಕ್ರೀನ್
ಸನ್ ಸ್ಕ್ರೀನ್ ಅನ್ನು ಬೇಸಿಗೆಯಲ್ಲಿ ಮಾತ್ರ ಬಳಸಬೇಕಾಗಿಲ್ಲ. ಸೂರ್ಯನಿಂದ ಬರುವ UVA, UVB, UVC ಕಿರಣಗಳು ಅಕಾಲಿಕ ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ವರ್ಷದ ಎಲ್ಲಾ ಸೀಸನ್ನಲ್ಲಿ ಸನ್ ಸ್ಕ್ರೀನ್ ಅನ್ನು ಬಳಸುವುದರಿಂದ ಈ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಸನ್ ಸ್ಕ್ರೀನ್ಅನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪು ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಅನ್ನು ತಡೆಯುತ್ತದೆ.
ಗ್ರೀನ್ ಟೀ
ಹಸಿರು ಚಹಾವನ್ನು ಕುಡಿಯುವುದು ಚರ್ಮದ ಪ್ರಯೋಜನಗಳನ್ನು ನೀಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಗ್ರೀನ್ ಟೀ ತ್ವಚೆಯನ್ನು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ ಚರ್ಮದ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಹೊಂದಿದೆ. ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ, ಹಸಿರು ಚಹಾದಲ್ಲಿರುವ ಕ್ಯಾಟೆಚಿನ್ಗಳು ಜೀವಕೋಶದ ಹಾನಿಯನ್ನು ತಡೆಯುವ ಒಂದು ರೀತಿಯ ಆ್ಯಂಟಿ ಆಕ್ಸಿಡೆಂಟ್ ಎನ್ನಬಹುದು.