ವಿಶ್ವದ ಕೋಟ್ಯಾಧಿಪತಿಗಳ ಮಕ್ಕಳ ಜೀವನ ಶೈಲಿ ಹೇಗಿರುತ್ತದೆ? ಅವರೇನು ಓದಿರುತ್ತಾರೆ ಎಂಬಿತ್ಯಾದಿ ಕುತೂಹಲ ಎಲ್ಲರಲ್ಲೂ ಇರುತ್ತದೆ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ , ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್ ಸೇರಿದಂತೆ ಹಲವು ಕೋಟ್ಯಾಧೀಶ್ವರ ಮಕ್ಕಳ ಆಡಂಬರ ಜೀವನ, ಅವರ ಹವ್ಯಾಸಗಳು, ಅವರೆಲ್ಲಿ ಸುತ್ತಾಡುತ್ತಾರೆ ಎಂಬ ಆಸಕ್ತಿಕ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.
ಜೆನಿಫರ್ ಗೇಟ್ಸ್: ಬಿಲ್ ಗೇಟ್ಸ್ ಮಗಳು ಇತ್ತೀಚೆಗಷ್ಟೇ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದರು. 2018-19 ರ ಪದವಿಪೂರ್ವ ಶಿಕ್ಷಣದ ಟ್ಯೂಶನ್ಗಾಗಿ ಜೆನಿಫರ್ ವ್ಯಯಿಸಿದ್ದು ಬರೋಬ್ಬರಿ 50,700 ಡಾಲರ್. ಶಿಕ್ಷಣದೊಂದಿಗೆ ಪ್ರವಾಸವನ್ನು ಹೆಚ್ಚು ಇಷ್ಟ ಪಡುವ ಸಾಫ್ಟ್ವೇರ್ ಸಂಸ್ಥಾಪಕನ ಮಗಳು ಇಟಲಿಯಿಂದ ಹಿಡಿದು ಬಾರ್ಸಿಲೋನಾ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವ ಪ್ರಮುಖ ನಗರಗಳಲ್ಲಿ ಸುತ್ತಾಟ ನಡೆಸುತ್ತಾರೆ.
ಇವ್ ಜಾಬ್ಸ್: ಆ್ಯಪಲ್ ಕಂಪನಿಯ ಸಂಸ್ಥಾಪಕನ ಮಗಳು ಇವ್ ಜಾಬ್ಸ್ಗೆ ಕುದುರೆ ಸವಾರಿ ಎಂದರೆ ಬಲು ಇಷ್ಟವಂತೆ. ಇದಕ್ಕಾಗಿಯೇ ಸ್ಟೀವ್ ಜಾಬ್ಸ್ ಮಗಳಿಗಾಗಿ ಈ ಹಿಂದೆ ಫ್ಲೋರಿಡಾದಲ್ಲಿ 37 ಮಿಲಿಯನ್ ಡಾಲರ್ನಲ್ಲಿ ಎಲ್ಲ ಅನುಕೂಲವಿರುವ ಆಸ್ತಿಯೊಂದನ್ನು ಖರೀದಿಸಿದ್ದರು. ಅಲ್ಲದೆ ತಾಯಿ ಲಾರೆನ್ ಪಾಲ್ ಮಗಳಿಗಾಗಿ ವಿಲ್ಲಿಂಗ್ಟನ್ನಲ್ಲಿ 15 ಮಿಲಿಯನ್ ಡಾಲರ್ಗೆ ಜಾನುವಾರು ಫಾರ್ಮ್ನ್ನು ಖರೀದಿ ಮಾಡಿದ್ದರು. ಪ್ರಾಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಇವ್ ಜಾಬ್ಸ್ ಇತ್ತೀಚೆಗೆ ಲೊಲ್ಲಾಪಲೂಜಾ ವಾರ್ಷಿಕ ಸಂಗೀತ ಉತ್ಸವದಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದ ಪಾಸ್ನ್ನು 400 ಡಾಲರ್ಗಿಂತಲೂ ಅಧಿಕ ಬೆಲೆ ನೀಡಿ ಇವ್ ಖರೀದಿಸಿದ್ದರು.
ಜಾರ್ಜಿನಾ ಬ್ಲೂಮ್ಬರ್ಗ್: ಬ್ಲೂಮ್ಬರ್ಗ್ ಸ್ಥಾಪಕ ಮಿಷೆಲ್ ಬ್ಲೂಮ್ಬರ್ಗ್ ಅವರ ಮಗಳು ಜಾರ್ಜಿನಾಗೂ ಕುದುರೆ ಸವಾರಿ ಅಂದರೆ ಪಂಚಪ್ರಾಣ. ಕುದುರೆ ರೇಸ್ ಸೇರಿದಂತೆ ಕೆಲ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಜಾರ್ಜಿನಾ ಹಲವು ರೇಸ್ನಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಪ್ರತಿ ವರ್ಷ 13 ಕುದುರೆಗಳನ್ನು ಜಾರ್ಜಿನಾ ಖರೀದಿಸುತ್ತಿರುವುದು ಅವರ ಕುದುರೆ ಕ್ರೇಜ್ಗೆ ಸಾಕ್ಷಿ. ಇದಲ್ಲದೆ ಪ್ರವಾಸವನ್ನು ಹೆಚ್ಚು ಇಷ್ಟಪಡುವ ಮಿಷೆಲ್ ಮಗಳು ಪ್ಯಾರಿಸ್, ಬರ್ಮುಡಾ ಮತ್ತು ಫ್ರಾನ್ಸ್ ಸೇರಿದಂತೆ ಪ್ರಮುಖ ದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ.
ಹಾಲಿ ಬ್ರಾನ್ಸನ್: ಬ್ರಿಟನ್ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮಗಳು. ಹಾಲಿ ಬ್ರಾನ್ಸನ್ ವಸ್ತುಗಳ ಖರೀದಿಗಿಂತ ಅಡ್ವೆಂಚರ್ಸ್ನ್ನು ಹೆಚ್ಚು ಇಷ್ಟಪಡುತ್ತಾರೆ. ಇಂತಹದೊಂದು ಹವ್ಯಾಸ ಇರುವುದರಿಂದ ಹಾಲಿ ಸದಾ ಒಂದಲ್ಲ ಒಂದು ಬೆಟ್ಟ ಗುಡ್ಡಗಳನ್ನು ಹತ್ತುವ ಸಾಹಸ ಮಾಡುತ್ತಾಳೆ. ಯುರೋಪ್ನಲ್ಲಿ ನಡೆದ ವಿಶ್ವ ಮ್ಯಾರಥಾನ್ನಲ್ಲೂ ಹಾಲಿ ಬ್ರಾನ್ಸನ್ ಕಾಣಿಸಿರುವುದು ಇದೇ ಕಾರಣಕ್ಕೆ.