ಈ ಮೊದಲೇ ಹೇಳಿದಂತೆ ಹೃದಯಾಘಾತಕ್ಕೂ ವಯಸ್ಸಿಗೂ ಸಂಬಂಧವಿಲ್ಲ. ಈ ಹಿಂದೆ 60 ವರ್ಷ ಮೇಲ್ಪಟ್ಟವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಈಗ ಮೊದಲಿನಂತಿಲ್ಲ. ಹಸುಳೆಯಿಂದ ಹಿಡಿದು ವಯೋವೃದ್ಧರವರೆಗೆ ಯಾವುದೇ ವಯಸ್ಸಿನವರು ಯಾವುದೇ ಸಮಯದಲ್ಲಿ ಹೃದಯಾಘಾತದ ಅಪಾಯವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಕಣ್ಣಮುಂದೆಯೇ ನಡೆಯುತ್ತಿವೆ. ಹೃದಯಾಘಾತ ಏಕೆ ಸಂಭವಿಸುತ್ತದೆ? ಮೊದಲು ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ.
ಹೃದಯಾಘಾತಕ್ಕೆ ಮುಖ್ಯ ಕಾರಣ ಹೃದಯಕ್ಕೆ ರಕ್ತ ಪೂರೈಕೆಯಾಗುವಾಗ ಅಡಚಣೆಯಾಗುವುದು. ದೇಹದಲ್ಲಿ ಸಂಗ್ರಹವಾದ ಕೊಬ್ಬು ಹೃದಯಾಘಾತಕ್ಕೆ ಕಾರಣವಾಗಬಹುದು. ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ರಕ್ತ ಸಂಚಾರದಲ್ಲಿ ಅಡಚಣೆ ಉಂಟಾಗುತ್ತದೆ. ಇದು ಹೃದಯಕ್ಕೆ ರಕ್ತ ಪೂರೈಕೆಯನ್ನು ಅಡ್ಡಿಪಡಿಸುತ್ತದೆ. ಪರಿಣಾಮವಾಗಿ, ಹೃದಯ ಸ್ನಾಯು ಆಮ್ಲಜನಕದಿಂದ ವಂಚಿತವಾಗುತ್ತದೆ. ಇದು ಸ್ನಾಯುಗಳು ಸಾಯುವಂತೆ ಮಾಡುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಕೆಲವು ಲಕ್ಷಣಗಳು ಹೃದಯಾಘಾತದ ಮೊದಲು ಕಾಣಿಸಿಕೊಳ್ಳುತ್ತವೆ. ಅವು ಯಾವುವು ಎಂಬುದನ್ನು ನೋಡೋಣ. ಹೃದಯಾಘಾತದ ಮೊದಲು ಉಸಿರಾಟದ ತೊಂದರೆ ಉಂಟಾಗುತ್ತದೆ. ಅಂತಹ ಲಕ್ಷಣ ಕಂಡುಬಂದರೆ, ತಡಮಾಡದೆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸಿ. ತೊದಲುವಿಕೆ, ಗೊಂದಲ, ನೀವು ಏನು ಹೇಳಲು ಬಯಸುತ್ತೀರೋ ಅದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿರುವುದು ಅಥವಾ ಅದೇ ವಿಷಯವನ್ನು ಪದೇ ಪದೇ ಪುನರಾವರ್ತಿಸುವುದು ಇವೆಲ್ಲವೂ ಹೃದಯಾಘಾತಕ್ಕೆ ಮುಂಚಿನ ಲಕ್ಷಣಗಳಾಗಿವೆ.
ನಿಮಗೆ ಎದೆಯುರಿ ಅನಿಸಿದರೆ, ತಕ್ಷಣವೇ ಆಸ್ಪತ್ರೆಗೆ ಹೋಗಿ. ಇದು ಹೃದಯಾಘಾತದ ಲಕ್ಷಣ ಎಂಬುದನ್ನು ಮರೆಯಬೇಡಿ. ಪದೇ ಪದೇ ಜ್ವರ ಮತ್ತು ಕೆಮ್ಮು ಬರುವುದು ಹೃದಯಾಘಾತಕ್ಕೆ ಕಾರಣವಾಗಬಹುದು. ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಹೃದಯ ಭಾರ ಎನಿಸಿದರೆ ಹೃದ್ರೋಗ ತಜ್ಞರನ್ನು ಸಂಪರ್ಕಿಸಿ. ಅತಿಯಾಗಿ ಬೆವರುವುದೂ ಸಹ ಹೃದಯಾಘಾತದ ಲಕ್ಷಣವಾಗಿರಬಹುದು. ತೀವ್ರ ಆಯಾಸ ಮತ್ತು ನೋವನ್ನು ನಿರ್ಲಕ್ಷಿಸಬೇಡಿ.
ವಾಕರಿಕೆ, ವಾಂತಿ, ಅಜೀರ್ಣ, ಗ್ಯಾಸ್ ಮತ್ತು ಎದೆಯುರಿ ಸಹ ಹೃದಯಾಘಾತದ ಚಿಹ್ನೆಗಳು. ಕಾಲುಗಳು, ಪಾದಗಳು ಮತ್ತು ಹಿಮ್ಮಡಿಗಳು ಊದಿಕೊಂಡಿದ್ದರೆ, ಹೃದಯಾಘಾತದ ಸಾಧ್ಯತೆಗಳು ಹೆಚ್ಚು ಎಂದು ಅರಿತುಕೊಳ್ಳಬೇಕು. ಎಡಗೈಯ ಕೆಳಗೆ ನೋವು ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಕೆಲವರಿಗೆ ದವಡೆ ನೋವು, ಗಂಟಲು ನೋವು ಕಾಡುತ್ತದೆ. ಇದೂ ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ಯಾವುದೇ ಸಣ್ಣಪುಟ್ಟ ಕೆಲಸ ಮಾಡಿದ ನಂತರ ಹೃದಯವು ವೇಗವಾಗಿ ಬಡಿಯುತ್ತಿದ್ದರೆ, ಅದು ಹಾರ್ಟ್ ಅಟ್ಯಾಕ್ನ ಲಕ್ಷಣ ಆಗಿರಬಹುದು. ಮೇಲೆ ತಿಳಿಸಿದವುಗಳಲ್ಲಿ ಯಾವುದಾದರೂ ಎರಡು ಲಕ್ಷಣಗಳು ಕಂಡುಬಂದರೆ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.