ಮಲ್ಲಿಗೆಯನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಮನಸ್ಸಿಗೆ ಸಂತೃಪ್ತಿಗೊಳಿಸುವ ಮತ್ತು ಉಲ್ಲಾಸವನ್ನು ಉಂಟು ಮಾಡುವ ಸೊಗಸಾದ ಪರಿಮಳವನ್ನು ಹೊಂದಿದೆ. ಹಾಗಾಗಿ ಮಲ್ಲಿಗೆ ಹೂವನ್ನು ಬೆಲ್ಲೆ ಆಫ್ ಇಂಡಿಯಾ ಅಥವಾ ಸುಗಂಧದ ರಾಣಿ ಎಂದು ಕರೆಯಲಾಗುತ್ತದೆ. ಮಲ್ಲಿಗೆಯನ್ನು ಭಾರತದ ವಿವಿಧ ಭಾಗಗಳಲ್ಲಿ ಮೊಗ್ರಾ, ಮೋಟಿಯಾ, ಚಮೇಲಿ, ಮಲ್ಲಿ ಪುವ್ವು, ಜಾಟಿ, ಮುಲ್ಲಾ, ಜಾಸ್ಮಿನ್, ಜೂಹಿ, ಮೊಗ್ರಾ ಅಥವಾ ತೋಪಿನ ಬೆಳದಿಂಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಅದರಲ್ಲಿಯೂ ಮಲ್ಲಿಗೆಯಲ್ಲು ಸಾಕಷ್ಟು ವಿಧವಿದ್ದು, ಏಷ್ಯಾದಲ್ಲಷ್ಟೇ ಅಲ್ಲದೇ ಮಲ್ಲಿಗೆ ಹೂವನ್ನು ಗ್ರೀಸ್,ಟರ್ಕಿ, ಸ್ಪೇನ್, ಫ್ರಾನ್ಸ್, ಇಟಲಿ, ಪಶ್ಚಿಮ ಯುರೋಪ್ , ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿದೆ. ಇನ್ನೂ ಮಲ್ಲಿಗೆ ಹೂವು ಅಂದರೆ ಮಹಿಳೆಯರಿಗೆ ಬಹಳ ಇಷ್ಟ. ಸೀರೆಯೊಂದಿಗೆ ಮಲ್ಲಿಗೆ ಹೂವು ಮುಡಿದ ಹೆಣ್ಣು ಮಕ್ಕಳನ್ನು ನೋಡಲು ಎರಡು ಕಣ್ಣು ಸಾಲದು ಎಂದೇ ಹೇಳಬಹುದು. ಅಷ್ಟೇ ಅಲ್ಲದೇ ಮಲ್ಲಿಗೆ ಹೂವಿಗೆ ಹಲವರ ಮೂಡ್ ಬದಲಾಯಿಸುವಷ್ಟು ಸಾಮರ್ಥ್ಯವಿದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ.
ಹೃದಯಕ್ಕೆ ಒಳ್ಳೆಯದು: ಮಲ್ಲಿಗೆ ಹೂವಿನಲ್ಲಿರುವ ಆಂಟಿಕೊಗ್ಯುಲೆಂಟ್ ಮತ್ತು ಆಂಟಿ ಫೈಬ್ರಿನೊಲಿಟಿಕ್ ಗುಣಲಕ್ಷಣಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಕೂಡಾ ಸಹಾಯಕವಾಗಿದೆ. ಹಾಗಾಗಿ ಹೃದಯದ ಸಮಸ್ಯೆ ಇರುವವರು ಪ್ರತಿನಿತ್ಯ ತಮ್ಮ ಆಹಾರದ ಜೊತೆಗೆ ಮಲ್ಲಿಗೆ ಆಧಾರಿತ ಪದಾರ್ಥಗಳನ್ನು ಸೇವಿಸುವುದು ಉತ್ತಮ.
ಜೀರ್ಣಕ್ರಿಯೆ ಸುಧಾರಿಸುತ್ತೆ: ಮಲ್ಲಿಗೆ ಹೂವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಗ್ಯಾಸ್, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಅಲ್ಲದೇ ಜೀರ್ಣಾಂಗದಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೇ, ದೇಹದಿಂದ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ. ಹೀಗಾಗಾಗಿ ಅನೇಕ ಮಂದಿ ಊಟದ ನಂತರ ಮಲ್ಲಿಗೆ ಚಹಾ ಕುಡಿಯುತ್ತಾರೆ.