ತುಪ್ಪ(Ghee) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟ ಈ ತುಪ್ಪ. ಇವತ್ತು ತುಪ್ಪದ ಆರೋಗ್ಯಕರ ಪ್ರಯೋಜನಗಳನ್ನು(Health Benefits) ಕೇಳಿದರೆ ತುಪ್ಪ ತಿನ್ನದವರೂ ಸಹ ಇಂದಿನಿಂದ ತಿನ್ನಲು ಶುರು ಮಾಡುತ್ತಾರೆ. ಅಂತಹ ಸೂಪರ್ ಫುಡ್(Super food) ತುಪ್ಪ. ಅದರಲ್ಲೂ ಚಳಿಗಾಲದಲ್ಲಿ(Winter) ತುಪ್ಪ ಸೇವನೆಯಿಂದ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬು ಇದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಚಳಿಗಾಲದ ನಮ್ಮ ಆಹಾರದಲ್ಲಿ ತುಪ್ಪ ಇರಬೇಕು ಎಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ.
ತುಪ್ಪವು ಮೆದುಳಿನ ಆರೋಗ್ಯ, ಕರುಳಿದ ಆರೋಗ್ಯ ಮಾತ್ರವಲ್ಲದೇ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಆಯುರ್ವೇದ ವೈದ್ಯರೂ ಸಹ ತುಪ್ಪ ತಿನ್ನುವಂತೆ ಸಲಹೆ ನೀಡುತ್ತಾರೆ. ಆದರೆ ಡಯೆಟ್ ಮಾಡುವವರು ತುಪ್ಪವನ್ನು ತಿನ್ನುವುದಿಲ್ಲ. ತುಪ್ಪ ತಿಂದರೆ ತೂಕ ಹೆಚ್ಚಾಗುವುದಿಲ್ಲ. ಬದಲಾಗಿ ಇಳಿಕೆಯಾಗುತ್ತದೆ. ಇದನ್ನು ಕೇಳಿ ಆಶ್ಚರ್ಯಪಡಬೇಡಿ. ಇಂದಿನಿಂದಲೇ ತುಪ್ಪವನ್ನು ತಿನ್ನಿ. ತೂಕ ಇಳಿಸಿಕೊಳ್ಳಿ.
ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ- ತುಪ್ಪದಲ್ಲಿರುವ ಪೌಷ್ಟಿಕಾಂಶದ ಗುಣ ನಮ್ಮ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಎಂಬ ಕಿಣ್ವಗಳು ಇದ್ದು, ಆಹಾರಗಳನ್ನು ವಿಭಜಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ರೊಟ್ಟಿಗೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸುವುದರಿಂದ ಅದು ಮೃದುವಾಗುವುದಲ್ಲದೆ ನಿಮ್ಮ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ.
ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡುತ್ತದೆ- ತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದು ಕೆಮ್ಮು ಮತ್ತು ಶೀತಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಶುದ್ಧ ಹಸುವಿನ ತುಪ್ಪವನ್ನು ಬಿಸಿ ಮಾಡಿ, ಮೂಗಿನ ಹೊಳ್ಳೆಗಳಿಗೆ ಒಂದೆರಡು ಹನಿ ಹಾಕಿದರೆ, ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರ ನೀಡುತ್ತದೆ.
ನಿಮ್ಮ ಚರ್ಮವನ್ನು ಒಳಗಿನಿಂದ ತೇವಗೊಳಿಸುತ್ತದೆ- ತುಪ್ಪವು ನಮ್ಮ ದೇಹವನ್ನು ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದಲೂ ನೈಸರ್ಗಿಕವಾಗಿ ಮಾಯಿಶ್ಚರೈಸರ್ ಮಾಡುತ್ತದೆ. ಇದು ನಮ್ಮ ಚರ್ಮದ ಪದರಗಳನ್ನು ಒಳಗಿನಿಂದ ತೇವಗೊಳಿಸಲು ಕೆಲಸ ಮಾಡುತ್ತದೆ.ತುಪ್ಪವು ಅಗತ್ಯವಾದ ಕೊಬ್ಬಿನಿಂದ ಮಾಡಲ್ಪಟ್ಟಿದೆ, ಅದು ನಿಮ್ಮ ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದು ಒಣ ನೆತ್ತಿ ಮತ್ತು ಕೂದಲನ್ನು ತೇವಗೊಳಿಸುತ್ತದೆ.