ಒಂದು ತಿಂಗಳ ಸ್ನೇಹ, ಸುತ್ತಾಟ ಮತ್ತು ಬ್ರೇಕ್ ಅಪ್...ತಾನು ಎಂತಹ ವ್ಯಕ್ತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿದ್ದೇನೆ ಎಂಬುದರ ಅರಿವು ಆಕೆಗಿರಲಿಲ್ಲ. ಮುಂದೆ ಏನಾಗಲಿದೆ ಎಂಬುದರ ಕಲ್ಪನೆಯು ಅವಳಿಗಿರಲಿಲ್ಲ. ಪ್ರತಿ ಬಾರಿಯು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದ ಅವನು ಅವಳನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳಲು ಬಯಸಿದ್ದನು. ಆದರೆ ಅದಾಗಲೇ ಅವಳು ಈ ಪ್ರೀತಿ-ಪ್ರೇಮಕ್ಕೆ ತೀಲಾಂಜಲಿ ನೀಡಲು ನಿರ್ಧರಿಸಿದ್ದಳು. ಆದರೆ ಒಂದು ತಿಂಗಳ ಒಡನಾಟ ಗುಂಡುಗಳ ಸದ್ದಿನೊಂದಿಗೆ ಅಂತ್ಯವಾಯಿತು.
ಆಕೆ 21 ವರ್ಷದ ಲಾರೆನ್. ಅಮೆರಿಕದ ಉತಾಹ್ ವಿಶ್ವ ವಿದ್ಯಾಲಯದ ಅಥ್ಲೀಟ್. ಕ್ರೀಡಾಂಗಣದಲ್ಲಿ ಅವಳು ಹರಿಸುತ್ತಿದ್ದ ಮಿಂಚಿನ ಸಂಚಲನವೇ ಮುಂದೊಂದು ದಿನ ಚಿನ್ನದ ಪದಕ ಗ್ಯಾರೆಂಟಿ ಎಂಬುದನ್ನು ತಿಳಿಸುತ್ತಿತ್ತು. ಆದರೆ ತನ್ನ ಜೀವನದಲ್ಲಿ ತೆಗೆದುಕೊಂಡ ತಪ್ಪಿನ ನಿರ್ಧಾರ ಜೀವನದ ಟ್ರ್ಯಾಕ್ನ್ನು ಬದಲಿಸಲಿದೆ ಎಂಬುದು ಗೊತ್ತಿರಲಿಲ್ಲ. ಸೆಪ್ಟೆಂಬರ್ನಲ್ಲಿ ತಿಂಗಳಲ್ಲಿ ಲಾರೆನ್ 37 ವರ್ಷದ ಜಾನ್ ಎಂಬವರನ್ನು ಭೇಟಿಯಾಗಿದ್ದಳು. ಮೊದಲ ಭೇಟಿಯಲ್ಲೇ ಲಾರೆನ್ಳ ಹೃದಯ ಕದಿಯುವಲ್ಲಿ ಜಾನ್ ಯಶಸ್ವಿಯಾಗಿದ್ದ. ಈ ಸ್ನೇಹವೇ ಸಭೆ ಸಮಾರಂಭಗಳಲ್ಲಿ ಇಬ್ಬರನ್ನು ಜೊತೆಗೂಡುವಂತೆ ಮಾಡಿತ್ತು. ಆತ್ಮೀಯತೆ ಹೆಚ್ಚಾದಂತೆ ಇಬ್ಬರೂ ಡೇಟಿಂಗ್ ಕೂಡ ಪ್ರಾರಂಭಿಸಿದರು. ಒಂದು ತಿಂಗಳಾಗುವಷ್ಟರಲ್ಲಿ ಇಬ್ಬರ ನಡುವೆ ಪ್ರೇಮ ಚಿಗುರೊಡೆಯಿತು. ಪ್ರೇಮವು ನಿಧಾನಕ್ಕೆ ದೈಹಿಕ ಸಂಬಂಧದತ್ತ ಹೊರಳಿತು. ಇಬ್ಬರು ಸಮಯ ಸಿಕ್ಕಾಗೆಲ್ಲಾ ಜೊತೆಯಾಗುತ್ತಿದ್ದರು.
ಮೊದಲ ತಿಂಗಳಲಲ್ಲೇ ಇಬ್ಬರ ನಡುವೆ ಸಂಬಂಧ ಗಟ್ಟಿಯಾಗಿತ್ತು. ಇದರ ನಡುವೆ ಅಕ್ಟೋಬರ್ ಮೊದಲ ವಾರದಲ್ಲಿ ಲಾರೆನ್ಗೆ ಅಚ್ಚರಿಯೊಂದು ಕಾದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಜಾನ್ ಪ್ರೋಫೈಲ್ ವೀಕ್ಷಿಸಿದಾಗ ಅಲ್ಲಿ ಬೇರೊಂದು ಹೆಸರು ಕಾಣಿಸಿದೆ. ಜಾನ್ ತನ್ನ ಖಾತೆಯ ಹೆಸರಲ್ಲಿ ಮೆಲ್ವಿನ್ ಎಂದು ನಮೂದಿಸಿದ್ದ, ಇದನ್ನು ಲಾರೆನ್ ಪ್ರಶ್ನಿಸಿದಳು. ಈ ವೇಳೆ ತನ್ನ ಮೂಲ ಹೆಸರು ಮೆಲ್ವಿನ್ ಎಂದು ನುಣುಚಿಕೊಂಡನು. ಆದರೆ ಜಾನ್ ವರ್ತನೆ ಮೇಲೆ ಲಾರೆನ್ಗೆ ಸಂಶಯ ಮೂಡಿದೆ.
ಜಾನ್ ಯಾಕೆ ನೈಜ ಹೆಸರನ್ನು ಮರೆಮಾಚಿದ್ದ ಎಂಬ ಪ್ರಶ್ನೆಯನ್ನು ತನಗೇ ತಾನೇ ಲಾರೆನ್ ಪ್ರಶ್ನಿಸಿಕೊಂಡಳು. ಉತ್ತರ ಮಾತ್ರ ಸಿಗುತ್ತಿರಲಿಲ್ಲ. ಹೀಗಾಗಿ ಮೆಲ್ವಿನ್ ಐಡಿಯನ್ನು ಮತ್ತಷ್ಟು ಪರಿಶೀಲಿಸಿದಳು. ಈ ಬಾರಿ ಒಂದಷ್ಟು ಮಾಹಿತಿಗಳು ಸಿಕ್ಕವು. ಅದರಲ್ಲಿದ್ದ ಜಾನ್ ವಯಸ್ಸು ನೋಡಿ ಲಾರೆನ್ ಹೈರಾಣಳಾದಳು. ಏಕೆಂದರೆ ಜಾನ್ ತನ್ನ ವಯಸ್ಸನ್ನೂ ಸುಳ್ಳು ಹೇಳಿದ್ದ ಎಂಬುದು ಗೊತ್ತಾಗಿತ್ತು.ಇದರಿಂದ ಜಾನ್ ಹಿನ್ನಲೆ ಕುರಿತು ಅನುಮಾನಗಳು ಮೂಡಿದೆ. ಜಾನ್ ಫೋಟೋ ಮತ್ತು ಒಂದಷ್ಟು ಡಿಟೇಲ್ಸ್ನೊಂದಿಗೆ ಇಂಟರ್ನೆಟ್ನಲ್ಲಿ ಹುಡುಕಾಡಿದ್ದಾಳೆ. ಆದರೆ ಬಾರಿ ಸಿಕ್ಕ ಮಾಹಿತಿ ನೋಡಿ ಯುವ ಅಥ್ಲೀಟ್ ಸಂಪೂರ್ಣ ಕುಗ್ಗಿ ಹೋಗಿದ್ದಾಳೆ. ಹೌದು, ಉತಾಹ್ ರಾಜ್ಯದ ಲೈಂಗಿಕ ಅಪರಾಧಿಗಳ ಪಟ್ಟಿಗಳಲ್ಲಿ ಜಾನ್ ಫೋಟೋ ಕಾಣಿಸಿಕೊಂಡಿದೆ. ತಾನು ಯಾಮಾರಿರುವುದು ಪಕ್ಕಾ ಎಂಬುದು ಆಗಲೇ ಲಾರೆನ್ ಅರಿವು ಬಂದಿರುವುದು. ದೇಶಕ್ಕಾಗಿ ಚಿನ್ನ ಗೆಲ್ಲಬೇಕೆಂದು ಕನಸು ಕಂಡಿದ್ದ ಲಾರೆನ್ ಸಂಗಾತಿ ಅಮೆರಿಕದ ಕ್ರಿಮಿನಲ್ ಎಂಬುದು ಹೊರ ಜಗತ್ತಿಗೆ ಗೊತ್ತಾದರೆ? ಮುಂದೇನಾಗಬಹುದು...ಎಂಬಿತ್ಯಾದಿ ಗೊಂದಲದೊಂದಿಗೆ ಮೆಲ್ವಿನ್ ಜತೆಗಿನ ಸಂಬಂಧ ಕಡಿದುಕೊಳ್ಳಲು ಲಾರೆನ್ ನಿರ್ಧರಿಸಿ ಬಿಟ್ಟಳು.
ಮರುದಿನವೇ ಮೆಲ್ವಿನ್ನೊಂದಿಗೆ ನಿನ್ನಂತಹ ಕ್ರಿಮಿನಲ್, ವಂಚಕನೊಂದಿಗೆ ಯಾವುದೇ ಸಂಬಂಧ ಹೊಂದಿರಲು ಬಯಸುವುದಿಲ್ಲ. ನನ್ನನ್ನು ಭೇಟಿಯಾಗಲು ಅಥವಾ ಸಂಪರ್ಕಿಸಲು ಪ್ರಯತ್ನ ಪಡಬೇಡ ಎಂದು ಮನೆಯಿಂದ ಹೊರಗೆ ಹಾಕಿದಳು. ತಲೆ ತಗ್ಗಿಸಿ ನಿಂತಿದ್ದ ಮೆಲ್ವಿನ್ ಮತ್ತೊಮ್ಮೆ ಲಾರೆನ್ ಮನವೊಲಿಸಲು ಪ್ರಯತ್ನಿಸಿದ. ಆದರೆ ಲೈಂಗಿಕ ಆರೋಪಿಯಾಗಿದ್ದ ಮೆಲ್ವಿನ್ರನ್ನು ಕ್ಷಮಿಸಲು ಲಾರೆನ್ ತಯಾರಿರಲಿಲ್ಲ. ಇದಾದ ಕೆಲ ದಿನಗಳ ಬಳಿಕ ಮತ್ತೆ ಮೆಲ್ವಿನ್ ಲಾರೆನ್ ಮುಂದೆ ಕಾಣಿಸಿಕೊಂಡಿದ್ದಾನೆ. ಬೆದರಿಸಲು ಪ್ರಯತ್ನಿಸಿದರೂ ಲಾರೆನ್ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆ. ಇಲ್ಲದಿದ್ದರೆ ಇಂತಿಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಯುನಿರ್ವಸಿಟಿ ಪೊಲೀಸ್ ಠಾಣೆಯಲ್ಲಿ ಮೆಲ್ವಿನ್ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ತನ್ನ ಕಾರನ್ನು ಮೆಲ್ವಿನ್ ವಶದಲ್ಲಿಟ್ಟುಕೊಂಡಿರುವುದಾಗಿ ಲಾರೆನ್ ತಿಳಿಸಿದ್ದಳು.
ಮೊದಲೇ ಕುಪಿತಗೊಂಡಿದ್ದ ಮೆಲ್ವಿನ್ಗೆ ದೂರು ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಜಾನ್ ಕೋಪ ನೆತ್ತಿಗೇರಿದೆ. ಮೋಸದಾಟ ಪ್ರತಿಕಾರದ ರೂಪವನ್ನು ಪಡೆದುಕೊಂಡಿದೆ. ಅಂದು ಅಕ್ಟೋಬರ್ 22. ಎಂದಿನಂತೆ ರಾತ್ರಿ ತನ್ನ ಕ್ರೀಡಾಂಗಣದ ಅಭ್ಯಾಸವನ್ನು ಮುಗಿಸಿ ಲಾರೆನ್ ತನ್ನ ಕೋಣೆಗೆ ಹಿಂತಿರುಗಿದ್ದಳು. ತಾಯಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ ರೂಮ್ನಲ್ಲಿ ಕೂತಿದ್ದಳು. ಇದ್ದಕ್ಕಿದ್ದಂತೆ ಲಾರೆನ್ ಮುಂದೆ ಮೆಲ್ವಿನ್ ಪಿಸ್ತೂಲ್ ಹಿಡಿದು ನಿಂತಿದ್ದ. ಇದನ್ನು ನೋಡುತ್ತಿದ್ದಂತೆ ಲಾರೆನ್ ಅರ್ಧಜೀವವೇ ಹೋದಂತಾಗಿತ್ತು. ಬೇಡ..ಬೇಡ..ಬೇಡ...ಎನ್ನುತ್ತಿದ್ದಂತೆ ಮೂರು ಗುಂಡುಗಳು ಲಾರೆನ್ ಎದೆಯನ್ನು ಹೊಕ್ಕಿಯಾಗಿತ್ತು. ಅತ್ತಕಡೆ ಫೋನಿನಲ್ಲಿ ಮಗಳ ಕಿರುಚಾಟ ಕೇಳಿದ ತಾಯಿ ಗಾಬರಿಗೊಂಡಳು. ಏನೋ ಅಹಿತಕರ ಘಟನೆ ನಡೆದಿದೆ ಎಂದು ಲಾರೆನ್ ತಾಯಿ ಕುಟುಂಬದವರಿಗೆ ವಿಷಯ ಮುಟ್ಟಿಸಿದರು.
ಲಾರೆನ್ ಸತ್ತಿದ್ದಾಳೆ ಎಂದು ದೃಢಪಡಿಸಿದ ಮೆಲ್ವಿನ್ ಆಕೆಯ ಶರೀರವನ್ನು ಕಾರ್ ಪಾರ್ಕಿಂಗ್ನಲ್ಲಿ ಎಸೆದು ,ಅಲ್ಲಿಂದ ಸೀದಾ ರೆಸ್ಟೋರೆಂಟ್ಗೆ ತೆರಳಿದ್ದ. ಅದಾಗಲೇ ಮೆಲ್ವಿನ್ ಆನ್ಲೈನ್ ಮೂಲಕ ಮತ್ತೊಬ್ಬಳನ್ನು ಪಟಾಯಿಸಿದ್ದ. ಏನೂ ನಡೆಯದಿಲ್ಲವಂತೆ ತನ್ನ ಪ್ರೇಯಸಿಯೊಂದಿಗೆ ಮೋಜು ಮಸ್ತಿ ಮಾಡಿ ಆಕೆಯೊಂದಿಗೆ ಅಪಾರ್ಟ್ಮೆಂಟ್ಗೆ ಬಂದನು. ರಾತ್ರಿಯೆಲ್ಲಾ ಸರಳ ಸಲ್ಲಾಪದಲ್ಲಿ ಕಳೆದ ಮೆಲ್ವಿನ್ ಬೆಳಗಿನ ಜಾವ ಆಕೆಯನ್ನು ಡ್ರಾಪ್ ಮಾಡಲು ಕಾಫಿ ಶಾಪ್ ಒಂದರ ಬಳಿ ತೆರಳಿದ್ದನು. ಅದಾಗಲೇ ಲಾರೆನ್ ಕೊಲೆಯ ಸಂಬಂಧ ಪೊಲೀಸರು ಮೆಲ್ವಿನ್ಗಾಗಿ ಬಲೆ ಬೀಸಿದ್ದರು. ತನ್ನನ್ನು ಪೊಲೀಸರು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಮೆಲ್ವಿನ್ ಪೊಲೀಸರೊಂದಿಗೆ ಗುಂಡಿನ ಚಕಮಕಿಗೆ ಇಳಿದು ಬಿಟ್ಟ. ಎರಡು ಕಡೆಯಿಂದ ಸುತ್ತುವರಿದಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ. ಮೆಲ್ವಿನ್ನನ್ನು ಪೊಲೀಸರು ಬಂಧಿಸಿದರು. ಆದರೆ ಇಂದು ಮುಂದು ಗೊತ್ತಿಲ್ಲದೆ ಬೆಳೆಸಿದ ಸಂಬಂಧ ಲವ್ ಸೆಕ್ಸ್ ದೋಖಾಗೆ ಕಾರಣವಾಗಿದಲ್ಲದೇ, ಯುವ ಅಥ್ಲೀಟ್ನ್ನು ಬಲಿ ತೆಗೆದುಕೊಂಡಿದ್ದು ವಿಪರ್ಯಾಸ.