ತರಕಾರಿಗಳ ಸೇವನೆಯಿಂದ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಪಡೆಯಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅವುಗಳನ್ನು ಯಾವ ರೀತಿ ಸೇವಿಸುವುದು ಉತ್ತಮ ಎಂಬುದರ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಸಾಮಾನ್ಯವಾಗಿ ಸಿಪ್ಪೆ ಸುಲಿಯುವ ಮೂಲಕ ತರಕಾರಿಗಳನ್ನು ಬಳಸಲಾಗುತ್ತದೆ. ಆದರೆ ಈ ಸಿಪ್ಪೆಗಳಲ್ಲೇ ಹೆಚ್ಚಿನ ರುಚಿ ಹಾಗೂ ಅನೇಕ ಪೋಷಕಾಂಶ ಒಳಗೊಂಡಿರುತ್ತವೆ ಎಂಬುದೇ ಸತ್ಯ. ಹಾಗಿದ್ರೆ ಸಿಪ್ಪೆಯೊಂದಿಗೆ ಸೇವಿಸಬೇಕಾದ 5 ತರಕಾರಿಗಳಾವುವು? ಅದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳಾವುವು ನೋಡೋಣ.
ಬೀಟ್ ರೂಟ್ಗಳು: ಬೀಟ್‌ರೂಟ್‌ನಲ್ಲಿ ಅನೇಕ ಔಷಧೀಯ ಮತ್ತು ಆರೋಗ್ಯವನ್ನು ಹೆಚ್ಚಿಸುವ ಗುಣಗಳಿವೆ ಎಂದು ಡಾ.ಲಕ್ಷ್ಮಿದತ್ತ ಶುಕ್ಲಾ ಹೇಳುತ್ತಾರೆ. ಬೀಟ್ರೂಟ್ ಅನ್ನು ಕಚ್ಚಾ, ಸೂಪ್, ಸಲಾಡ್ ರೀತಿಯಲ್ಲಿ ತಿನ್ನಬಹುದು. ಇದರಲ್ಲಿ ಫೈಬರ್, ವಿಟಮಿನ್ ಬಿ 9, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಬೀಟ್ರೂಟ್ ರಕ್ತದ ಹರಿವು ಮತ್ತು ರಕ್ತದೊತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಸಿಪ್ಪೆ ಸಹ ಆರೋಗ್ಯಕರ. ಅದರ ಮೇಲಿನ ಪದರವನ್ನು ತೆಗೆದುಹಾಕುವ ಅಗತ್ಯವಿಲ್ಲ. ತುಂಬಾ ಚೆನ್ನಾಗಿ ಸ್ವಚ್ಛಗೊಳಿಸಿ ಇದನ್ನು ಬಳಸಿಕೊಳ್ಳಬಹುದು. ಬೀಟ್ರೂಟ್ನ ಸಿಪ್ಪೆಯಲ್ಲಿರುವ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್: ಅಗತ್ಯವಾದ ಪೋಷಕಾಂಶಗಳಾದ ಬೀಟಾ-ಕ್ಯಾರೋಟಿನ್, ಫೈಬರ್, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಅ್ಯಂಟಿ ಆಕ್ಸಿಡೆಂಟ್‌ಗಳು ಕ್ಯಾರೆಟ್‌ನ ವಿವಿಧ ಪದರಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದರ ಸೇವನೆಯು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅದೆರ ಜೊತೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿ. ನೀವು ಕ್ಯಾರೆಟ್ ಮೇಲಿನ ಪದರವನ್ನು ತೆಗೆದರೆ, ಈ ತರಕಾರಿಯ ಅತ್ಯಂತ ನಾರಿನ ಮತ್ತು ಪೌಷ್ಟಿಕ ಅಂಶವನ್ನು ಕಳೆದುಕೊಳ್ಳುತ್ತೀರಿ. ಅದನ್ನು ಚೆನ್ನಾಗಿ ತೊಳೆದು ಸೇವಿಸುವುದು ಉತ್ತಮ.
ಸೌತೆಕಾಯಿ: ಸೌತೆಕಾಯಿ ಸಿಪ್ಪೆ ಮತ್ತು ಅದರ ಬೀಜಗಳು ಹೆಚ್ಚು ಪೌಷ್ಟಿಕವಾಗಿದೆ. ಅನೇಕ ರೋಗಗಳ ವಿರುದ್ಧ ಹೋರಾಡಲು ಮುಖ್ಯವಾದ ಕಿಣ್ವವಾದ ಅ್ಯಂಟಿಆಕ್ಸಿಡೆಂಟ್ ಸೌತೆಕಾಯಿ ಸಿಪ್ಪೆಯಲ್ಲಿ ಸಾಕಷ್ಟು ಕಂಡುಬರುತ್ತದೆ. ನೀವು ಸೌತೆಕಾಯಿಯ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಲು ಬಯಸಿದರೆ, ಅದನ್ನು ಚೆನ್ನಾಗಿ ತೊಳೆಯಿರಿ ಮತ್ತು ಸಿಪ್ಪೆ ಸುಲಿಯದೆ ಸೇವಿಸಿ. ಅಧ್ಯಯನಗಳ ಪ್ರಕಾರ, ಸೌತೆಕಾಯಿಯ ಸೇವನೆಯು ಸಕ್ಕರೆ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸೋರೆಕಾಯಿ: ಡಾ. ಲಕ್ಷ್ಮಿದತ್ತ ಶುಕ್ಲಾ ಅವರ ಪ್ರಕಾರ, ವಿಟಮಿನ್ ಎ, ಬಿ 1, ಬಿ 2 ಮತ್ತು ಸಿ ತುಂಬಿದ ಸೋರೆಕಾಯಿಯನ್ನು ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅವು ಕೆಲವೇ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತವೆ. ಸೋರೆಕಾಯಿಯ ಸಿಪ್ಪೆಯಲ್ಲಿ ಸಾಕಷ್ಟು ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ ಅಂಶಗಳಿರುತ್ತವೆ. ಹೀಗಾಗಿ ಇದನ್ನು ಸಹ ಚೆನ್ನಾಗಿ ತೊಳೆದು ಸಿಪ್ಪೆಯೊಂದಿಗೆ ಸೇವಿಸುವುದು ಉತ್ತಮ.
ಆಲೂಗಡ್ಡೆ: ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ತಿನ್ನಲು ಇಷ್ಟಪಡುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಆದರೆ ಇದನ್ನು ಯಾವಾಗಲೂ ಅದನ್ನು ಸಿಪ್ಪೆ ತೆಗೆದು ಬಳಸಲಾಗುತ್ತದೆ. ಆಲೂಗಡ್ಡೆ ಸಿಪ್ಪೆ ವಾಸ್ತವವಾಗಿ ಬಹಳ ಪೌಷ್ಟಿಕ ಮತ್ತು ಜೀವಸತ್ವಗಳು, ಖನಿಜಗಳು ಮತ್ತು ನಾರಿನಿಂದ ಕೂಡಿದೆ. ಮಲಬದ್ಧತೆಯಂತಹ ಸಮಸ್ಯೆಗಳಿರುವ ಜನರು ಇದನ್ನು ನಿಯಮಿತವಾಗಿ ಸೇವಿಸಬೇಕು. ಹೀಗಾಗಿ ಆಲೂಗಡ್ಡೆಯನ್ನು ಸಹ ಚೆನ್ನಾಗಿ ತೊಳೆದು ಸಿಪ್ಪೆಯೊಂದಿಗೆ ಬಳಸುವುದು ಉತ್ತಮ.