ಮಕ್ಕಳಿಗೆ ಸಕ್ಕರೆ ಕೊಡಲೇಬಾರದು! ಹುಟ್ಟಿದ ನಂತರ ಮೊದಲ ಎರಡು ವರ್ಷಗಳ ಕಾಲ ನಿಮ್ಮ ಮಗುವಿಗೆ ಸಿಹಿತಿಂಡಿಗಳನ್ನು, ಅದರಲ್ಲೂ ವಿಶೇಷವಾಗಿ ಸಕ್ಕರೆಯ ಆಹಾರಗಳನ್ನು ನೀಡುವುದು ಮಗುವಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಹಾರ ಸಂಸ್ಕರಣೆಯ ಸಮಯದಲ್ಲಿ ಸಕ್ಕರೆಗಳನ್ನು ಸೇರಿಸಲಾಗುತ್ತದೆ. ಸಿಹಿತಿಂಡಿಗಳು, ಸಿರಪ್ಗಳು ಮತ್ತು ಹಣ್ಣು / ತರಕಾರಿ ಜ್ಯೂಸ್ ಗಳಿಗೆ ಸಕ್ಕರೆಯನ್ನು ಸೇರಿಸಲಾಗುತ್ತದೆ. ಅದರಲ್ಲೂ ಮೊಸರು, ಬೇಬಿ ಸ್ನ್ಯಾಕ್ಸ್, ಹಣ್ಣಿನ ಪಾನೀಯಗಳು, ಸಿಹಿತಿಂಡಿಗಳು, ಸಿಹಿ ಬೇಕರಿ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಎಂದಿಗೂ ನೀಡಬಾರದು.
ಮಗು ಹುಟ್ಟಿದ ಮೊದಲ 24 ತಿಂಗಳವರೆಗೆ ಮಗುವಿಗೆ ಸರಿಯಾದ ಬೆಳವಣಿಗೆಗೆ ಸಾಕಷ್ಟು ಪೋಷಕಾಂಶಗಳು ಮತ್ತು ಕ್ಯಾಲೋರಿಗಳು ಬೇಕಾಗುತ್ತವೆ. ಸಕ್ಕರೆಯ ಪದಾರ್ಥಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದರೂ, ಅವು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ. ಮೊದಲ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಶುಗಳು ಸಾಮಾನ್ಯವಾಗಿ ಕಡಿಮೆ ತಿನ್ನುತ್ತಾರೆ. ಅದಕ್ಕಾಗಿಯೇ ಅವರು ತಿನ್ನುವ ಆಹಾರವು ಅವರ ದೇಹಕ್ಕೆ ಒಳ್ಳೆಯದೇ ಎಂದು ಖಚಿತಪಡಿಸಿಕೊಳ್ಳಬೇಕು.
ದೀರ್ಘಾವಧಿಯ ಪರಿಣಾಮಗಳನ್ನು ಸಹ ನೆನಪಿಡಿ! ಮೊದಲ 2 ವರ್ಷಗಳವರೆಗೆ ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುವ ಶಿಶುಗಳು ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು, ಹೃದ್ರೋಗ ಮತ್ತು ದಂತಕ್ಷಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಮೊದಲ ಇಪ್ಪತ್ನಾಲ್ಕು ತಿಂಗಳುಗಳಲ್ಲಿ, ಶಿಶುಗಳು ತಾವು ತಿನ್ನುವ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಚಿಕ್ಕಂದಿನಿಂದಲೇ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಂಡರೆ ಅವರ ಭವಿಷ್ಯ ಆರೋಗ್ಯಕರವಾಗಿರುತ್ತದೆ