ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾವಿನ ಹಣ್ಣಿನಲ್ಲಿ ಸಿಹಿ ತಿಂಡಿಯೊಂದನ್ನು ತಯಾರಿಸಿದ ನಂತರ ಮಾಲ್ಡಾ ಜಿಲ್ಲೆಯ ಸಿಹಿ ವ್ಯಾಪಾರಿಗಳಿಂದ ಹಿಡಿದು ಆಡಳಿತ ಅಧಿಕಾರಿಗಳು ಈ ಬಗ್ಗೆ ಆಲೋಚನೆ ಮಾಡಲು ಆರಂಭಿಸಿದರು. ಕೇವಲ 7 ದಿನಗಳಲ್ಲಿ ಮಾಲ್ಡಾ ಜಿಲ್ಲೆಯ ಹಲವಾರು ವ್ಯಾಪಾರಿಗಳು ವಿವಿಧ ರೀತಿಯ ಮಾವಿನ ಸಿಹಿತಿಂಡಿಗಳನ್ನು ಸಿದ್ಧಪಡಿಸಿದರು. ನಂತರ ತಯಾರಿಸಿದ ಸಿಹಿತಿಂಡಿಗಳನ್ನು ಜಿಲ್ಲಾಡಳಿತಕ್ಕೆ ಪ್ರದರ್ಶಿಸಿದರು. ನಂತರ ಈ ಫ್ಯಾನ್ಸಿ ಸ್ವೀಟ್ ಸಿಕ್ಕಾಪಟ್ಟೆ ಫೇಮಸ್ ಆಯಿತು. ಇದೀಗ, ಉದ್ಯಮಿಗಳು ಹಣ್ಣಾದ ಮಾವಿನ ಹಣ್ಣಿನಿಂದ ಸಿಹಿತಿಂಡಿಗಳನ್ನು ತಯಾರಿಸಲು ಆರಂಭಿಸಿದ್ದಾರೆ.
ಮಾಲ್ಡಾದಲ್ಲಿ ನಡೆದ ಆಡಳಿತ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾವಿನ ಸಿಹಿ ಮತ್ತು ಮಾವಿನ ಮೊಸರು ಮಾಡುವ ಪಾಕವಿಧಾನವನ್ನು ನೀಡಿದ್ದರು. ನಂತರ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದ ಜಿಲ್ಲೆಯ ಸಿಹಿ ವ್ಯಾಪಾರಿಗಳು ಬಳಿಕ ಮಾವಿನ ಹಣ್ಣಿನ ಸ್ವೀಟ್, ಮಾವಿನ ಮೊಸರು ತಯಾರಿಸಿದರು. ಈ ಉತ್ಪನ್ನಗಳು ಯಾವಾಗಲು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ, ಮಾವಿನ ಹಣ್ಣಿನ ಸೀಸನ್‌ನಲ್ಲಿ ಮಾವಿನ ಸ್ವೀಟ್, ಮಾವಿನ ಮೊಸರು ಸಿಗಲಿದೆ ಎಂದು ತಿಳಿಸಲಾಗಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಹಿತಿಂಡಿ ವ್ಯಾಪಾರಿ ಬಿಭಾಸ್ ಸರ್ದಾರ್ ಎಂಬವರು, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಪ್ರಾಯೋಗಿಕವಾಗಿ ನಾವು ಮಾವಿನ ಹಣ್ಣಿನೊಂದಿಗೆ ಹಲವಾರು ಸಿಹಿತಿಂಡಿಗಳನ್ನು ಮಾಡಲು ಪ್ರಯತ್ನಿಸಿದ್ದೇವೆ. ಆ ಎಲ್ಲಾ ಸಿಹಿತಿಂಡಿಗಳನ್ನು ಜಿಲ್ಲಾಧಿಕಾರಿಗಳಿಗೆ ಅರ್ಪಿಸುತ್ತೇವೆ.
ಮಾವಿನ ಹಣ್ಣಿನೊಂದಿಗೆ ಉತ್ತಮ ಗುಣಮಟ್ಟದ ಸಿಹಿತಿಂಡಿಗಳನ್ನು ಮಾಡಲು ನಾವು ಯಾವಾಗಲೂ ಪ್ರಯತ್ನಿಸುತ್ತೇವೆ. ಜನರಿಂದ ಈ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ನಮಗೂ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಅವಕಾಶವನ್ನು ಒದಗಿಸಿದ್ದಕ್ಕಾಗಿ ನಾವು ಜಿಲ್ಲಾಡಳಿತ ಮತ್ತು ಮಾಲ್ಡಾ ಮರ್ಚೆಂಟ್ ಚೇಂಬರ್ ಆಫ್ ಕಾಮರ್ಸ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಸಿಹಿತಿಂಡಿಗಳನ್ನು ಆಡಳಿತ ಅಧಿಕಾರಿಗಳು ಇಷ್ಟಪಟ್ಟರು. ಆದರೆ ಕುಶಲಕರ್ಮಿಗಳಿಗೆ ಮಾವಿನ ಸಿಹಿತಿಂಡಿಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಸಿಹಿ ತಯಾರಿಸುವವರಿಗೆ ತರಬೇತಿ ನೀಡಲಾಗುವುದು. ಇದರಿಂದ, ಅವರು ಉತ್ತಮ ಗುಣಮಟ್ಟದ ಸಿಹಿತಿಂಡಿಗಳನ್ನು ಮಾಡಬಹುದು. ಇದಲ್ಲದೇ ಮಾಲ್ಡಾದಲ್ಲಿ ಈ ತಿಂಗಳ ಅಂತ್ಯದಲ್ಲಿ ಮಾವು ಸಿಹಿ ಮೇಳ ನಡೆಸಲು ಆಡಳಿತ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಮೇಳದಲ್ಲಿ ಮಾವಿನ ಹಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ಸಿಹಿತಿಂಡಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು. ಹೀಗೆ ಮಾಡುವುದರಿಂದ ಸಾಮಾನ್ಯ ಜನರಲ್ಲಿ ಈ ಸಿಹಿ ಹೆಚ್ಚು ಪ್ರಚಾರವಾಗುತ್ತದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಇದೇ ವೇಳೆ ಮಾತನಾಡಿದ ಮಾಲ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಸಿಂಘಾನಿಯಾ, ಜಿಲ್ಲಾಡಳಿತವು ಮಾವು ಸಿಹಿ ಮೇಳವನ್ನು ಏರ್ಪಡಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಆದರೆ ದಿನಾಂಕವನ್ನು ಇನ್ನೂ ನಿಗದಿಸಲಾಗಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜೊತೆಗೆ ಮಾವಿನಿಂದ ಸಿಹಿ ತಯಾರಿಸುವ ಎಲ್ಲ ಕುಶಲಕರ್ಮಿಗಳು ಹಾಗೂ ಮಾಲೀಕರಿಗೆ ಜಿಲ್ಲಾಡಳಿತದಿಂದ ಶೀಘ್ರವೇ ವಿಶೇಷ ತರಬೇತಿ ನೀಡಲಾಗುವುದು. ಇದು ಉತ್ತಮ ಗುಣಮಟ್ಟದ ಸಿಹಿತಿಂಡಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.