ಏಲಕ್ಕಿ ಸ್ವಲ್ಪ ಕಟುವಾದರೂ ಸಿಹಿ ರುಚಿಯ ಮಸಾಲೆಯಾಗಿದೆ. ಏಲಕ್ಕಿ ಇಲ್ಲದೇ ಭಾರತದಲ್ಲಿ ಗರಂ ಮಸಾಲಾ ಮಾಡುವುದನ್ನು ಊಹಿಸಲೂ ಕೂಡ ಸಾಧ್ಯವಿಲ್ಲ. ಹಿಂದಿನ ಕಾಲದಲ್ಲಿ ಅನೇಕ ಮಂದಿ ಊಟದ ನಂತರ ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಆಗಿ ಬಳಸುತ್ತಿದ್ದರು. ಆದರೆ ಇಂದಿನ ಪೀಳಿಗೆ ಏಲಕ್ಕಿಯನ್ನು ಮಿತವಾಗಿ ತಿನ್ನುತ್ತಾರೆ. ಏಲಕ್ಕಿ ನೀರು, ಏಲಕ್ಕಿ ಎಣ್ಣೆ ಇತ್ಯಾದಿಗಳನ್ನು ಶತಮಾನಗಳಿಂದ ಭಾರತದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತಿದ್ದರೂ, ಏಲಕ್ಕಿ ಬೀಜಗಳನ್ನು ನಿಯಮಿತವಾಗಿ ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು.
ಉರಿಯೂತವನ್ನು ಕಡಿಮೆ ಮಾಡುತ್ತೆ: ಏಲಕ್ಕಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅಂದರೆ, ಇದು ಯಾವುದೇ ರೀತಿಯ ಸೋಂಕನ್ನು ತಗಲುವುದಕ್ಕೆ ಬಿಡುವುದಿಲ್ಲ. ದೇಹದ ಮೇಲೆ ಬಾಹ್ಯ ದಾಳಿಯಾದಾಗಲೆಲ್ಲಾ ದೇಹದ ಜೀವಕೋಶಗಳು ಊದಿಕೊಳ್ಳುತ್ತವೆ. ಏಲಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತವೆ ಮತ್ತು ಉರಿಯೂತವಾಗುವುದನ್ನು ತಡೆಯುತ್ತವೆ.
ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿ: ಏಲಕ್ಕಿ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಹೆಲ್ತ್ಲೈನ್ ಪ್ರಕಾರ, 12 ವಾರಗಳ ಅಧ್ಯಯನವು ದಿನಕ್ಕೆ 3 ಗ್ರಾಂ ಏಲಕ್ಕಿ ಪುಡಿಯನ್ನು ಸೇವಿಸುವ ಜನರ ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಏಲಕ್ಕಿ ತಿನ್ನುವವರಲ್ಲಿ ಆ್ಯಂಟಿಆಕ್ಸಿಡೆಂಟ್ಗಳು ಶೇಕಡಾ 90 ರಷ್ಟು ಹೆಚ್ಚಾಗುತ್ತವೆ ಎಂದು ಕಂಡುಬಂದಿದೆ. ಸಂಶೋಧನೆಯ ಪ್ರಕಾರ, ಏಲಕ್ಕಿ ಒಟ್ಟಾರೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.