ಗರ್ಭಾವಸ್ಥೆಯು ಪ್ರತಿ ಮಹಿಳೆಯರಿಗೂ ವಿಭಿನ್ನ ಅನುಭವವಾಗಿದೆ. ಪ್ರಸವಾನಂತರದ ಮಹಿಳೆಯರು ತಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮವನ್ನು ಮಾಡಲು ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಹೆರಿಗೆಯ ನಂತರ ಕಾಣಿಸಿಕೊಳ್ಳುವ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಮಾನ್ಯ ವಿಷಯವಲ್ಲ. ಪ್ರಸವಾನಂತರದ ಮಹಿಳೆಯರು ಸಾಮಾನ್ಯವಾಗಿ ಆಯಾಸ, ದೇಹದ ನೋವು, ಮನಸ್ಥಿತಿ ಬದಲಾವಣೆಗಳು ಮತ್ತು ಪ್ರಸವಾನಂತರದ ಖಿನ್ನತೆಯ ಪರಿಣಾಮಗಳೊಂದಿಗೆ ರೋಲರ್ ಕೋಸ್ಟರ್ ರೈಡ್ ಅನ್ನು ದಿನವಿಡೀ ಅನುಭವಿಸುತ್ತಾರೆ.
ಹೆರಿಗೆಯ ನಂತರ ಬೆಲ್ಟ್ ಬಳಸುವುದರಿಂದ ಯಾವುದೇ ಹಾನಿ ಇಲ್ಲ ಎಂದು ಜರ್ಮನಿಯ OBGYN ಡಾ. ಅಮಿನಾ ಖಾಲಿದ್ ಹೇಳುತ್ತಾರೆ. ಇದರ ಬಳಕೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಹೊಟ್ಟೆ ಕೊಬ್ಬನ್ನು ಕಳೆದುಕೊಳ್ಳಲು ಆರೋಗ್ಯಕರ ಆಹಾರ ಮತ್ತು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಅತ್ಯಗತ್ಯ ಎಂದು ತಿಳಿಸಿದ್ದಾರೆ. ಹಾಗಾದ್ರೆ ಹೆಂಗಸರು ಪ್ರಸವಾನಂತರದ ಬೆಲ್ಟ್ ಅನ್ನು ಏಕೆ ಬಳಸಬೇಕು? ಈ ಬಗ್ಗೆ ತಜ್ಞರು ಏನು ಹೇಳಿದ್ದಾರೆ ಎಂಬುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಸಿಸೇರಿಯನ್ ಹೆರಿಗೆಗೆ ಒಳಗಾಗುವ ಮಹಿಳೆಯರಿಗೆ ಸಹಾಯಕ: ಸಿಸೇರಿಯನ್ ಹೆರಿಗೆಗೆ ಒಳಗಾಗುವ ತಾಯಂದಿರಿಗೆ ಬೆಲ್ಟ್ ಎರಡು ರೀತಿಯಲ್ಲಿ ಸಹಾಯಕವಾಗಿದೆ. ಮೊದಲನೇಯದು ಚಲನೆಗಳ ನಿಯಂತ್ರಣ. ಹೌದು, ಇದು ಸಡಿಲವಾದ ಕಿಬ್ಬೊಟ್ಟೆಯ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಚಲಿಸುವಾಗ ಇದು ಕಡಿಮೆ ನೋವನ್ನು ಉಂಟುಮಾಡುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅದು ಹೊಲಿಗೆಗಳನ್ನು ಬೇರ್ಪಡಿಸದಂತೆ ತಡೆಯುತ್ತದೆ.