ಇಂದಿನ ಒತ್ತಡದ ಜೀವನದಲ್ಲಿ ವ್ಯಾಯಾಮ ಮತ್ತು ಆಹಾರ ನಿಯಮಿತವಾಗಿರಲೇಬೇಕು. ಎಲ್ಲ ಸರಿಯಾಗಿದ್ದರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುವ ಇಂದಿನ ದಿನಗಳಲ್ಲಿ ವ್ಯಾಯಾಮ ಮಾಡದೇ ಆಹಾರದಲ್ಲಿ ನಿಯಂತ್ರಣ ಇಲ್ಲದೇ ಹೋದರೆ ಮುಗಿದೇ ಹೋಯಿತು. ಯೋಗ ಒಂದು ಅತ್ಯುತ್ತಮ ವ್ಯಾಯಾಮವಾಗಿದೆ. ಅನೇಕ ರೋಗಗಳು ಬಾರದಂತೆ ತಡೆಯುವ ಈ ಯೋಗ ಅನೇಕ ಸಮಸ್ಯೆಗಳು ಬಂದ ಮೇಲೂ ಅವುಗಳಿಗೆ ಉತ್ತಮ ಪರಿಹಾರವಾಗುತ್ತವೆ.
ಸೂರ್ಯ ನಮಸ್ಕಾರವು 12 ಆಸನಗಳನ್ನು ಒಳಗೊಂಡಿದ್ದು, ಅವುಗಳೆಂದರೆ ಪ್ರಣಾಮಾಸನ, ಹಸ್ತ ಉತ್ತಾನಾಸನ, ಪಾಸ ಹಸ್ತಾಸನ, ಅಶ್ವ ಸಂಚಲನಾಸನ, ದಂಡಾಸನ, ಅಷ್ಟಾಂಗ ನಮಸ್ಕಾರ, ಭುಜಂಗಾಸನ, ಅಧೋಮುಖ ಶ್ವಾನಾಸನ, ಅಶ್ವ ಸಂಚಲನಾಸನ, ಹಸ್ತಪಾದಾಸನ, ಹಸ್ತ ಉತ್ತಾನಾಸನ, ತಾಡಾಸನ. ಆದರೆ ಇವುಗಳನ್ನು ಸರಿಯಾದ ಉಸಿರಾಟದ ಕ್ರಮದಲ್ಲಿ, ಸರಿಯಾದ ವಿಧಾನದಲ್ಲಿಯೇ ಮಾಡುವುದು ಕೂಡ ಅಷ್ಟೇ ಮುಖ್ಯ.
ತೂಕವನ್ನು ಕಳೆದುಕೊಳ್ಳಲು ಸಹಕಾರಿ: ಪ್ರತಿದಿನವೂ ತಪ್ಪದೇ ಸೂರ್ಯನಮಸ್ಕಾರ ಮಾಡುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಸೂರ್ಯ ನಮಸ್ಕಾರವು ಹೃದಯರಕ್ತನಾಳದ ವ್ಯಾಯಾಮವಾಗಿ ಕಾರ್ಯನಿರ್ವಹಿಸುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ತೂಕ ಕಳೆದುಕೊಳ್ಳುವ ಗುರಿಯನ್ನು ಹೊಂದಿರುವವರು ಸೂರ್ಯ ನಮಸ್ಕಾರವನ್ನು ಪ್ರತಿದಿನವೂ ಮಾಡಬಹುದು.
ಸೊಂಪಾದ ಕೂದಲು ಮತ್ತು ಹೊಳೆಯುವ ಚರ್ಮಕ್ಕಾಗಿ ಸೂರ್ಯ ನಮಸ್ಕಾರ: ಸೂರ್ಯನಮಸ್ಕಾರ ಮಾಡಿದಾಗ ರಕ್ತ ಪರಿಚಲನೆ ಸುಧಾರಿಸುತ್ತದೆ. ಮೆದುಳಿಗೆ ರಕ್ತ ಪ್ರವಹಿಸುವ ಮೂಲಕ ಕೂದಲ ಆರೋಗ್ಯ ಸುಧಾರಿಸುತ್ತದೆ. ಅಲ್ಲದೇ ಕೂದಲನ್ನು ಮೃದುಗೊಳಿಸಲೂ ಇದು ಸಹಾಯಕ. ಜೊತೆಗೆ ಚರ್ಮದ ಆರೋಗ್ಯಕ್ಕೂ ಸೂರ್ಯನಮಸ್ಕಾರ ಒಳ್ಳೆಯದು. ಮುಖವನ್ನು ತಾಜಾತನದಿಂದ ಇರಿಸುವುದಲ್ಲದೇ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಆಸನಗಳನ್ನು ಮಾಡುವಾಗ ಉಸಿರಾಟವನ್ನು ಒಳಗೆ ಎಳೆದುಕೊಳ್ಳುವುದು ಹಾಗೂ ಉಸಿರನ್ನು ಹೊರಹಾಕುವ ಪ್ರಕ್ರಿಯೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗುತ್ತವೆ.