ವೈದ್ಯರ ಮಾತೊಂದಿದೆ ನೀವು ಹೆಚ್ಚು ಹೊತ್ತು ಅಡುಗೆ ಮನೆಯಲ್ಲಿ ಸಮಯ ಕಳೆಯದಿದ್ದರೆ ಆಸ್ಪತ್ರೆಯಲ್ಲಿ ಕಳೆಯಬೇಕು ಎಂದು. ಈ ನಿಟ್ಟಿನಲ್ಲಿ ಇವತ್ತು ಆಹಾರ – ಅಡುಗೆ ಎನ್ನುವುದು ಸುಲಭದಲ್ಲಿ ಆಗಬೇಕಾದ ಧಾವಂತ ಎಲ್ಲರಲ್ಲೂ ಇದೆ. ದುಡಿಯುವ ಮಹಿಳೆಯರಿಗಂತೂ ಈ ಒತ್ತಡ ಕೊಂಚ ಹೆಚ್ಚೇ ಇದೆ. ಈ ಕಾರಣದಿಂದಲೇ ಅಡುಗೆ ಮನೆಯಲ್ಲಿ ಬೇಗ ಕೆಲಸ ಮುಗಿಸಲು ಹಲವಾರು ಉಪಕರಣಗಳು ಧಾವಿಸಿವೆ. ಆದರೆ ನೆನಪಿಡಿ ಇವುಗಳ ಮೇಲಿನ ಅವಲಂಬನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ರಿಫೈನ್ಡ್ ಸಕ್ಕರೆ: ನಮ್ಮ ದಿನ ಶುರವಾಗುವುದೇ ಸಕ್ಕರೆಭರಿತ ಕಾಫಿಯಿಂದ. ಆದರೆ ನೆನಪಿರಲಿ ಈ ಸಕ್ಕರೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಕ್ಕರೆ ತಯಾರಿಕಾ ಹಂತವು ಕೆಮಿಕಲ್ನಿಂದ ಕೂಡಿದೆ. ಅಲ್ಲದೇ ಇದರಿಂದ ಸಕ್ಕರೆ ಕಾಯಿಲೆ ಬರಬಹುದು. ದೇಹದಲ್ಲಿ ಉರಿಯೂತದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಕ್ಕರೆ ಬದಲಿಗೆ ಸಾವಯವ ಬೆಲ್ಲದ ಬಳಕೆ ಸೂಕ್ತ. ಜೊತೆಗೆ ಸಕ್ಕರೆ ಇರುವ ಆಹಾರವನ್ನು ದೂರವಿರಿಸುವುದು ಉತ್ತಮ.
ಪ್ಲ್ಯಾಸ್ಟಿಕ್ ಬಾಟೆಲ್ಸ್: ಇವತ್ತು ಎಲ್ಲೆಡೆ ವ್ಯಾಪಕವಾಗಿಪ್ಲ್ಯಾಸ್ಟಿಕ್ ಬಳಕೆಯಾಗುತ್ತಿದೆ. ಅದರಲ್ಲೂ ಪ್ಲ್ಯಾಸ್ಟಿಕ್ ಬಾಟಲಿಗಳ ಬಳಕೆ ಪ್ರಮಾಣ ದೊಡ್ಡದಿದೆ. ಬೇಸಿಗೆಯಲ್ಲಿ ಪ್ಲ್ಯಾಸ್ಟಿಕ್ ಬಳಕೆ ಒಳ್ಳೆಯದಲ್ಲ. ಇನ್ನೂ ಇದರಲ್ಲಿರುವ ಬಿಪಿಎ ನಿಂದ ಹಾರ್ಮೋನ್ ಅಸಮತೋಲನದಂತಹ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೇ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಈ ನಿಟ್ಟಿನಲ್ಲಿ ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡಿ.