ಚಂದೋರ್, ದಕ್ಷಿಣ ಗೋವಾ: ಗೋವಾ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಪ್ರಪಂಚದ ವಿವಿಧ ಮೂಲೆಗಳಿಂದ ಜನರು ಪ್ರವಾಸಕ್ಕೆ ಆಗಮಿಸುತ್ತಾರೆ. ಇಲ್ಲಿರುವ ಸ್ಥಳಗಳು ಕೂಡ ಎಲ್ಲರನ್ನು ಆಕರ್ಷಿಸುತ್ತದೆ. ಉದಾಹರಣೆಗೆ ಕಡಲತೀರಗಳು, ರೋಮಾಂಚಕಾರಿ ನೈರ್ಟ್ ಪಾರ್ಟಿ, ಅಭಿವೃದ್ಧಿ ಹೊಂದುತ್ತಿರುವ ಸ್ಥಳೀಯ ಮಾರುಕಟ್ಟೆಗಳು ಮತ್ತು ಹಲವಾರು ಸಾಹಸ ಕ್ರೀಡೆಗಳನ್ನು ಗೋವಾದಲ್ಲಿ ಟ್ರೈ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಏರ್ ಹಾಟ್ ಬಲೂನ್ ರೈಡ್ ಅನ್ನು ಕೂಡ ನೀವು ಗೋವಾದಲ್ಲಿ ಎಂಜಾಯ್ ಮಾಡಬಹುದಾಗಿದೆ. ನೆಲದ ಮೇಲಿನಿಂದ ಎತ್ತರಕ್ಕೆ ಹೋದಾಗ ಮರಳು ನಿಮಗೆ ಚಿನ್ನದಂತೆ ಕಾಣಿಸುತ್ತದೆ ಮತ್ತು ಅಲ್ಲದೇ ನೀಲಿ ಸಮುದ್ರ ಅದ್ಭುತವಾಗಿ ಕಾಣಿಸುತ್ತದೆ. ಇದು ನಿಮಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಒಂದು ಬಾರಿ ಈ ರೈಡ್ ಹೋಗಲು ಒಬ್ಬರಿಗೆ ಸುಮಾರು 14,000 ರೂ. ಎಂದು ಅಂದಾಜಿಸಲಾಗಿದೆ. ಹಾಟ್ ಏರ್ ಬಲೂನ್ ರೈಡ್ನಲ್ಲಿ ನೀವು ಸುಮಾರು 4,000 ಅಡಿ ಎತ್ತರದವರೆಗೆ ಹಾರಬಹುದಾಗಿದೆ.
ಹಂಪಿ, ಕರ್ನಾಟಕ: ಹಂಪಿ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣ. ಇಲ್ಲಿನ ಐತಿಹಾಸಿಕ ರಚನೆಗಳು, ಪುರಾತನ ದೇವಾಲಯಗಳು ಮತ್ತು ಗುಹಾ ತಾಣಗಳು ಆಕರ್ಷಣೀಯವಾಗಿದೆ. ಇಲ್ಲಿನ ಸ್ಥಳಗಳ ಅದ್ಭುತ ಸೌಂದರ್ಯವನ್ನು ಅದರ ಎಲ್ಲಾ ವೈಭವಗಳನ್ನು ತಿಳಿದುಕೊಳ್ಳಲು ನೀವು ಬಯಸಿದರೆ, ಒಮ್ಮೆ ಇಲ್ಲಿಗೆ ಭೇಟಿ ನೀಡಿ. ಹಂಪಿಯಲ್ಲಿ, ಎಲ್ಲಾ ಪ್ರಸಿದ್ಧ ದೇವಾಲಯಗಳು, ಸ್ಮಾರಕಗಳು ಮತ್ತು ಗುಹೆಗಳ ಸ್ಪಷ್ಟ, ವೈಮಾನಿಕ ದೃಷ್ಟಿಕೋನವನ್ನು ಪಡೆಯಲು ನೀವು ಹಾಟ್ ಏರ್ ಬಲೂನ್ ರೈಡ್ ಟ್ರೈ ಮಾಡಬಹುದು. ಹಾಟ್ ಏರ್ ಬಲೂನ್ ರೈಡ್ ಹೋಗಲು ಒಬ್ಬ ವ್ಯಕ್ತಿಗೆ ಇಲ್ಲಿ 8,000 ರೂ. ಇಂದ 12,000 ರೂ. ವರೆಗೂ ವೆಚ್ಚವಾಗುತ್ತದೆ ಮತ್ತು ನಿಮ್ಮನ್ನು ಸುಮಾರು 500 ಮೀಟರ್ಗಳಷ್ಟು ಎತ್ತರಕ್ಕೆ ಕರೆದೊಯ್ಯಲಾಗುತ್ತದೆ.
ಲೋನವಳ, ಮಹಾರಾಷ್ಟ್ರ: ಹಾಟ್ ಏರ್ ಬಲೂನ್ ರೈಡ್ಗಾಗಿ ಭಾರತದ ಮತ್ತೊಂದು ಅತ್ಯುತ್ತಮ ಸ್ಥಳವೆಂದರೆ ಮಹಾರಾಷ್ಟ್ರದ ಲೋನವಳ. ಇಲ್ಲಿನ ಪರಿಸರವು ಹಚ್ಚ ಹರಿಸಿನಿಂದ ಕೂಡಿದೆ. ಅಲ್ಲದೇ ಈ ಪ್ರದೇಶದಲ್ಲಿರುವ ಜಲಪಾತಗಳು, ಸುಂದರವಾದ ಸರೋವರಗಳು ಮತ್ತು ಬೆರಗುಗೊಳಿಸುವ ಕೋಟೆಗಳು ಪ್ರವಾಸಿಗರ ಗಮನ ಸೆಳೆಯುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಕೂಡ ನೀವು ಇಲ್ಲಿ ಕಾಣಬಹುದು. ಏರ್ ಹಾಟ್ ಬಲೂನ್ನಲ್ಲಿ ಸುಮಾರು 9 ಜನರು ಪ್ರಯಾಣಿಸಬಹುದು. ಇದು ನಿಮ್ಮನ್ನು ಸುಮಾರು 4,000 ಅಡಿ ಎತ್ತರಕ್ಕೆ ಕರೆದೊಯ್ಯುತ್ತದೆ. ಒಂದು ಗಂಟೆಯ ಹಾಟ್ ಏರ್ ಬಲೂನ್ ರೈಡ್ಗೆ ಇಲ್ಲಿ ಪ್ರತಿ ವ್ಯಕ್ತಿಗೆ ಸುಮಾರು 8,400 ರೂ.ಶುಲ್ಕ ವಿಧಿಸಲಾಗುತ್ತದೆ.
ಪುಷ್ಕರ್ ಮತ್ತು ಜೈಪುರ, ರಾಜಸ್ಥಾನ: ರಾಷ್ಟ್ರದ ಅತ್ಯಂತ ಕ್ರಿಯಾತ್ಮಕ ರಾಜ್ಯಗಳಲ್ಲಿ ರಾಜಸ್ಥಾನ ಕೂಡ ಒಂದು. ಮಹಾರಾಜರ ನಾಡಿನ ಗ್ರಾಮೀಣ ಸೊಗಡನ್ನು ಅನುಭವಿಸಲು ನೀವು ಇಲ್ಲಿ ಹಾಟ್ ಏರ್ ಬಲೂನ್ ರೈಡ್ ಮಾಡಬಹುದು. ಅದರಲ್ಲಿಯೂ ಹಾಟ್ ಏರ್ ಬಲೂನ್ ರೈಡ್ಗೆ ಪುಷ್ಕರ್ ಮತ್ತು ಜೈಪುರ ಬೆಸ್ಟ್ ಎಂದೇ ಹೇಳಬಹುದು. ಸರೋವರಗಳು, ಸುಂದರವಾದ ಕೋಟೆಗಳು ಮತ್ತು ಅದ್ಭುತ ರಾಜಮನೆತನದ ನಿವಾಸಗಳು ನಿಮಗೆ ಗೋಚರಿಸುತ್ತವೆ. ಆದರೆ ಒಂದು ಗಂಟೆಯ ಸವಾರಿಗಾಗಿ ಇಲ್ಲಿ ಪ್ರತಿ ವ್ಯಕ್ತಿಗೆ ಸುಮಾರು 14,000 ರೂ. ಶುಲ್ಕ ವಿಧಿಸಬಹುದಾಗಿದೆ.
ಆಗ್ರಾ: ಹಾಟ್ ಏರ್ ಬಲೂನ್ ರೈಡ್ ಹೋಗಲು ತಾಜ್ ಮಹಲ್ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಪ್ರೀತಿಯ ಸಾಂಕೇತಿಕ ಪ್ರಾತಿನಿಧ್ಯವಾಗಿರುವ ತಾಜ್ಮಹಲ್ ಮತ್ತು ಆಗ್ರಾದ ಎಲ್ಲಾ ಇತರ ಐತಿಹಾಸಿಕ ತಾಣಗಳ ವೀಕ್ಷಣೆಗೆ ನೀವು ಇಲ್ಲಿಗೆ ಭೇಟಿ ನೀಡಬಹುದು. ನೀವು ನವವಿವಾಹಿತರಾಗಿದ್ದರೆ, ಹನಿಮೂನ್ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ, ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಸಮಯ ಕಳೆಯಲು ಆಗ್ರಾಕ್ಕೆ ಪ್ರವಾಸ ಕೈಗೊಳ್ಳಬಹುದು. ಇದೇ ವೇಳೆ ನೀವು ಏರ್ ಬಲೂನ್ ರೈಡ್ ಅನ್ನು 15-20 ನಿಮಿಷಗಳವರೆಗೆ ಮಾಡಬಹುದು.