ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಜೆರೋಧಾ ಸಹ ಸಂಸ್ಥಾಪಕ ಮತ್ತು ಸಿಇಒ ಆದ ನಿತಿನ್ ಕಾಮತ್ ಅವರು ಸೋಮವಾರ ತಮ್ಮ ಮಾವ ಶಿವಾಜಿ ಪಾಟೀಲ್ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು 70 ವರ್ಷದ ಮಾವ ಹೇಗೆ ಉತ್ತಮವಾದ ಜೀವನವನ್ನು ನಡೆಸಬೇಕು ಎಂಬುದರ ಬಗ್ಗೆ ಹೇಗೆ ಒಳ್ಳೆಯ ಪಾಠವನ್ನು ಕಲಿಸಿದರು ಎಂಬುದನ್ನು ಸಹ ಹೇಳಿಕೊಂಡಿದ್ದಾರೆ.
ತಮ್ಮ ಮಾವ ನಿವೃತ್ತಿಯ ನಂತರ ಕರ್ನಾಟಕದ ಬೆಳಗಾವಿಯಲ್ಲಿ ಒಂದು ಚಿಕ್ಕ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದರು ಎಂದು ಕಾಮತ್ ತಮ್ಮ ಸುದೀರ್ಘವಾದ ಕಥೆಯನ್ನು ಟ್ವಿಟ್ಟರ್ ಥ್ರೆಡ್ ನಲ್ಲಿ ಹಂಚಿಕೊಂಡಿದ್ದಾರೆ. "ಅವರು ಮೊದಲು ಭಾರತೀಯ ಸೇನೆಯಲ್ಲಿದ್ದರು ಮತ್ತು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಿಮಪಾತದಿಂದ ಅವರು ತಮ್ಮ ಬೆರಳುಗಳನ್ನು ಕಳೆದುಕೊಂಡ ನಂತರ ಹವಾಲ್ದಾರ್ ಆಗಿದ್ದಾಗ ಸ್ವಯಂಪ್ರೇರಣೆಯಿಂದ ನಿವೃತ್ತರಾದರು" ಎಂದು ಕಾಮತ್ ತಮ್ಮ ಮಾವನ ಅಂಗಡಿಯಲ್ಲಿ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ಕಾಮತ್ ಮತ್ತು ಅವರ ಪತ್ನಿ ಸೀಮಾ ಅವರ ಯಶಸ್ಸಿನ ಹೊರತಾಗಿಯೂ ತಮ್ಮ ಮಾವ ಕೆಲಸ ಮಾಡುವುದನ್ನು ನಿಲ್ಲಿಸಲು ನಿರಾಕರಿಸುತ್ತಾರೆ ಎಂದು ಅವರು ಹೇಳಿದರು. "ಅಂಗಡಿಯಲ್ಲಿನ ವಿವಿಧ ಉತ್ಪನ್ನಗಳ ಮೇಲೆ ಸಿಗುವ ಲಾಭದ ಬಗ್ಗೆ ನಾನು ಕೇಳಿದರೆ, ಅವರು ಚಿಕ್ಕಿಗಳ ಮೇಲೆ ಸಿಗುವ ಶೇಕಡಾ 25 ರಷ್ಟು ಲಾಭದ ಬಗ್ಗೆ ಮಾತನಾಡುತ್ತಾರೆ, ಒಂದು ಬಾಕ್ಸ್ ಚಿಕ್ಕಿ ಅನ್ನು 200 ರೂಪಾಯಿಗೆ ಖರೀದಿಸಿ ಅದನ್ನು 250 ರೂಪಾಯಿಗೆ ಮಾರಾಟ ಮಾಡುತ್ತಾರೆ" ಎಂದು ನಿತಿನ್ ಕಾಮತ್ ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.
ಸದೃಢವಾಗಿರಲು ಉತ್ಸುಕರಾಗಿರುವ ಬಿಲಿಯನೇರ್ "ನಾನು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡು ಕೊನೆಯವರೆಗೂ ಉತ್ತಮ ಜೀವನವನ್ನು ಹೇಗೆ ನಡೆಸುವುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಉತ್ತರ ಇಲ್ಲಿ ಸಿಕ್ಕಿದೆ, ಜೀವನದಲ್ಲಿ ಸಂತೃಪ್ತವಾಗಿರಬೇಕು ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯವಾಗಿರಬೇಕು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಹಣವು ಇದನ್ನೆಲ್ಲಾ ಖರೀದಿಸಿ ಕೊಡಲು ಸಾಧ್ಯವಿಲ್ಲ ಮತ್ತು ನನ್ನ ಮಾವ ಇದಕ್ಕೆ ಉತ್ತಮ ಉದಾಹರಣೆ” ಅಂತ ಹೇಳಿದರು.