ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ ಶುರುವಾಗುತ್ತದೆ. ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಸಮಯದಲ್ಲಿ ಟೆನ್ಷನ್ ಇರುತ್ತದೆ. ಪರೀಕ್ಷೆಗೆ ಸಂಪೂರ್ಣ ತಯಾರಿ ಇಲ್ಲದಿದ್ದರೆ, ಸರಿಯಾಗಿ ಎಕ್ಸಾಂ ಬರೆಯಲು ಸಾಧ್ಯವಾಗುವುದಿಲ್ಲ ಎಂಬ ಭಾವನೆಯಿಂದಲೇ ಆತಂಕಕ್ಕೆ ಒಳಗಾಗುತ್ತಾರೆ. ಇಂತಹ ಉದ್ವಿಗ್ನತೆಯಿಂದಾಗಿ ಪರೀಕ್ಷೆಗೆ ಎರಡು ಮೂರು ತಿಂಗಳ ಮುಂಚೆಯೇ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಪರೀಕ್ಷೆಗೆ ತಯಾರಾಗಲು ತುಂಬಾ ಕಷ್ಟಪಟ್ಟು ಓದಬೇಕು ನಿಜ, ಆದರೆ ಅದಕ್ಕಾಗಿ ಟೆನ್ಷನ್ ತೆಗೆದುಕೊಳ್ಳಬೇಕು ಎಂದಲ್ಲ.
ತುಂಬಾ ನಿರಾಳ ಮನಸ್ಸಿನಿಂದ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಬಹುದು. ಪರೀಕ್ಷೆಯ ತಯಾರಿಗೆ ವಿದ್ಯಾರ್ಥಿಗಳು ಒಂದಿಷ್ಟು ಒಳ್ಳೆ ಸಲಹೆಗಳನ್ನು ಪಾಲಿಸಿದರೆ, ಫಲಿತಾಂಶವೂ ಚೆನ್ನಾಗಿ ಬರುತ್ತದೆ. ಪರೀಕ್ಷೆಗೆ ತಯಾರಿ ನಡೆಸಲು ಇಲ್ಲಿ ನಾವು ಕೆಲವು ಟಿಪ್ಸ್ಗಳನ್ನು ನೀಡಿದ್ದೇವೆ. ಅದರ ಸಹಾಯದಿಂದ ನೀವು ಯಾವುದೇ ಟೆನ್ಷನ್ ಇಲ್ಲದೆ ಆರಾಮವಾಗಿ ಪರೀಕ್ಷೆಯನ್ನು ಬರೆಯಬಹುದು.
ಪ್ರೋಟೀನ್ ಆಹಾರ ಸೇವನೆ- ಪರೀಕ್ಷೆಯ ಸಮಯದಲ್ಲಿ, ನಿಮ್ಮ ಉಪಹಾರವು ಸಾಮಾನ್ಯ ದಿನದಂತೆ ಇರಬಾರದು, ಅದರಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರೋದು ಮುಖ್ಯವಾಗುತ್ತದೆ. ಮೊಟ್ಟೆ, ಕಡಲೆಹಿಟ್ಟು, ಹಾಲು, ಪನೀರ್, ಮೊಳಕೆಕಾಳುಗಳು, ಹಸಿರು ತರಕಾರಿಗಳನ್ನು ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಸೇರಿಸಿ. ಪ್ರತಿದಿನ ಹಣ್ಣುಗಳ ಸೇವನೆ ಮಾಡಿ. ನಿಮ್ಮ ಆಹಾರದಲ್ಲಿ ಸಿಟ್ರಸ್ ಹಣ್ಣನ್ನು ಸೇರಿಸಿ. ಬೆಳಿಗ್ಗೆ ಎದ್ದಾಗ, ಪ್ರತಿದಿನದಂತೆ ಹೆಚ್ಚು ಕಾಫಿ ಕುಡಿಯಬೇಡಿ. ಸೀಸನಲ್ ತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನಿ. ಪರೀಕ್ಷೆಯ ಸಮಯದಲ್ಲಿ ನೀರನ್ನು ಹೆಚ್ಚಾಗಿ ಕುಡಿಯಿರಿ.
ವ್ಯಾಯಾಮ ಮಾಡಿ- ಪರೀಕ್ಷೆ ಹತ್ತಿರ ಬಂದ ತಕ್ಷಣ ನಿಯಮಿತವಾಗಿ ವ್ಯಾಯಾಮ ಮಾಡಿ. ಸ್ನಾಯು ಹಿಗ್ಗಿಸುವ ವ್ಯಾಯಾಮಗಳನ್ನು ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಯೋಗಾಸನ, ವ್ಯಾಯಾಮಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಓದುತ್ತಾ ಕುರ್ಚಿಯ ಮೇಲೆ ಹೆಚ್ಚು ಕಾಲ ಕುಳಿತುಕೊಳ್ಳಬೇಡಿ, ಆಗಾಗ್ಗೆ ಎದ್ದು ವ್ಯಾಯಾಮ ಮಾಡಿ ಸ್ನಾಯುಗಳನ್ನು ಬಲಗೊಳಿಸಿ. ವ್ಯಾಯಾಮ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.
ಸಮತೋಲಿತ ಆಹಾರ ಸೇವಿಸಿ - ಪರೀಕ್ಷೆಯಲ್ಲಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಹೆಲ್ತ್ಲೈನ್ನ ಸುದ್ದಿ ಪ್ರಕಾರ, ಬ್ಲೂಬೆರ್ರಿ, ಅರಿಶಿನ, ಎಲೆಕೋಸು, ಕುಂಬಳಕಾಯಿ ಬೀಜಗಳು, ಡಾರ್ಕ್ ಚಾಕೊಲೇಟ್, ಬಾದಾಮಿ, ಕಿತ್ತಳೆ, ಮೊಟ್ಟೆ, ಹಸಿರು ಚಹಾ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಈ ಆಹಾರಗಳು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.