ಹೌದು, ಈಶ್ವರ್ ಗುಜ್ಜರ್ ಬ್ಯಾಕ್ ಬೆಂಚ್ ಸ್ಟೂಡೆಂಟ್ ಜೊತೆಗೆ 10ನೇ ಕ್ಲಾಸ್ ಫೇಲ್ ಆದ ವಿದ್ಯಾರ್ಥಿ. ಆದರೆ ಮತ್ತೆ ಪುಟಿದೆದ್ದ ಈತ UPSC ಸಿವಿಲ್ ಸರ್ವೀಸ್ ಎಕ್ಸಾಂನಲ್ಲಿ ಯಶಸ್ಸು ಗಳಿಸಿ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದಾನೆ. ಯುಪಿಎಸ್ಸಿ ಜರ್ನಿಯಲ್ಲಿ 3 ಬಾರಿ ವಿಫಲತೆ ಕಂಡರೂ ಸಹ, ಎದೆಗುಂದಲಿಲ್ಲ. ಆ ಫೇಲ್ಯೂರ್ಗಳು ಆತನ ಉತ್ಸಾಹವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.
ಈಶ್ವರ್ ಗುಜ್ಜರ್ ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಬದಿಯಾ ಪ್ರದೇಶದವರು. ಇವರು 2022ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು 644ನೇ ರ್ಯಾಂಕ್ನಲ್ಲಿ ಪಾಸ್ ಮಾಡಿದ್ದಾರೆ. ಇವರ ತಂದೆ ಸುವಲಾಲ್ ಗುಜ್ಜರ್ ಒಬ್ಬ ರೈತ. ತಾಯಿ ಸುಖಿ ದೇವಿ ಗೃಹಿಣಿ. ತಂದೆ ತನ್ನ ಮಗನಿಗೆ ವ್ಯವಸಾಯ ಮಾಡುವುದನ್ನು ಹೇಳಿಕೊಟ್ಟಿದ್ದರು. ತನ್ನ ಮಗನ ಸಾಧನೆ ಕಂಡು ಈಗ ಸಂಭ್ರಮಿಸಿದ್ದಾರೆ. ಈಶ್ವರ್ ಗುರ್ಜರ್ ಸಹೋದರಿ ಭಾವನಾಗೆ ಮದುವೆಯಾಗಿದೆ. ಮತ್ತೊಬ್ಬ ಸಹೋದರಿ ಈಗ 12ನೇ ತರಗತಿ ಓದುತ್ತಿದ್ದಾಳೆ.
10ನೇ ಕ್ಲಾಸ್ ಫೇಲ್ ಆಗಿದ್ದ ಈಶ್ವರ್ ಗುಜ್ಜರ್:
ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ ಈಶ್ವರ್ ಗುಜ್ಜರ್, 2011ರಲ್ಲಿ 10ನೇ ಕ್ಲಾಸ್ ಫೇಲ್ ಆಗಿದ್ದರು. ಇದಾದ ಬಳಿಕ ಓದಿನ ಸಹವಾಸವೇ ಬೇಡ ಎಂದು ದೂರ ಉಳಿದಿದ್ದರಂತೆ. ಆದರೆ ಅವರ ತಂದೆ ಈ ಸಮಯದಲ್ಲಿ ಧೈರ್ಯ ಹೇಳಿ, ಸ್ಪೂರ್ತಿ ತುಂಬಿದ್ದಾರೆ. ಬಳಿಕ ಈಶ್ವರ್ 2012ರಲ್ಲಿ 54% ಅಂಕದೊಂದಿಗೆ 10ನೇ ಕ್ಲಾಸ್ ಮಾಡಿದ್ದಾರೆ. 12ನೇ ತರಗತಿ 68% ಅಂಕ ಪಡೆದಿದ್ದಾರೆ.
2019ರಲ್ಲಿ ಪ್ರಿಲಿಮಿನರಿ ಪರೀಕ್ಷೆಯನ್ನೂ ಪಾಸ್ ಮಾಡದ ಈಶ್ವರ್
ಈಶ್ವರ್ ಗುಜ್ಜರ್ ಯುಪಿಎಸ್ಸಿ ಪರೀಕ್ಷೆಯನ್ನು 4ನೇ ಪ್ರಯತ್ನದಲ್ಲಿ ಪಾಸ್ ಮಾಡಿದ್ದಾರೆ. 2019ರಲ್ಲಿ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ 2020ರಲ್ಲಿ ಸಂದರ್ಶನದವರೆಗೂ ತಲುಪಿದ್ದರು. ಇದಾದ ಬಳಿಕ 2021ರಲ್ಲಿ ಮತ್ತೆ ಫೇಲ್ ಆದರು. ಮೂರನೇ ಬಾರಿಯೂ ಯಶಸ್ಸು ಸಿಗಲಿಲ್ಲ. ಆದರೆ ಎದೆಗುಂದದ ಈಶ್ವರ್ ಸತತ ಪ್ರಯತ್ನ ಮಾಡಿದ್ದರು.