ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್
ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು, ದೇಶಾದ್ಯಂತ ಒಟ್ಟು 933 ಮಂದಿ ಯುಪಿಎಸ್ಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇವರಲ್ಲಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳು, 99 ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಇನ್ನು, ಇವರಲ್ಲಿ 263 ಜನರು ಒಬಿಸಿ, 154 ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ರೆ, ಬಾಕಿ 72 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಹುಬ್ಬಳ್ಳಿಯ ಸಿದ್ದಲಿಂಗಪ್ಪ 589ನೇ ಶ್ರೇಣಿ
ಯುಪಿಎಸ್ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಯುವಕ ಸಾಧನೆ ಮಾಡಿದ್ದಾನೆ. ಕೆಎಸ್ಆರ್ಟಿಸಿ ಡ್ರೈವರ್ ಮಗನಾಗಿರುವ ಸಿದ್ದಲಿಂಗಪ್ಪ ಕೆ ಪೂಜಾರ್ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 589ನೇ ಶ್ರೇಣಿಯಲ್ಲಿ ಪರೀಕ್ಷೆ ಪಾಸ್ ಮಾಡಿ ಯಶಸ್ಸು ಪಡೆದಿದ್ದಾರೆ. ಇವರು ಮೂಲತಃ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ. ಕಡು ಬಡತನವಿದ್ದರೂ ಕಷ್ಟಪಟ್ಟು ಓದಿ ಸಾಧನೆ ಮಾಡಿದ್ದಾರೆ.
ಶಿವಮೊಗ್ಗದ ಮೇಘನಾ 617ನೇ ಶ್ರೇಣಿ
ಶಿವಮೊಗ್ಗ ಜಿಲ್ಲೆಯ ಹಾಲ್ಕೊಳ ಬಡಾವಣೆಯ ಐ.ಎನ್.ಮೇಘನಾ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯಶಸ್ಸು ಗಳಿಸಿದ್ದಾರೆ. ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ 617ನೇ ರ್ಯಾಂಕ್ ಪಡೆದಿದ್ದಾರೆ. ಮೇಘನಾ ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ ಸಂದರ್ಶನ ಎದುರಿಸುವಲ್ಲಿ ವಿಫಲರಾಗಿದ್ದರು. ಈ ಬಾರಿ ಮರಳಿ ಯತ್ನವ ಮಾಡುವ ಎನ್ನುವ ರೀತಿ, ಛಲ ಬಿಡದೆ ಮತ್ತೆ ಪರೀಕ್ಷೆ ಬರೆದಿದ್ದಾರೆ. ಇವರು ಸಂದರ್ಶನದಲ್ಲಿ ಪಾಸಾಗಲಿ ಎಂದು ಹಾರೈಸೋಣ.