Great Batting- ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಕೇವಲ 27 ಬಾಲ್ನಲ್ಲಿ 41 ರನ್ ಗಳಿಸಿದರು. ಆರ್ಸಿಬಿಯ 92 ರನ್ ಮೊತ್ತವನ್ನು ಕೆಕೆಅರ್ ಸುಲಭವಾಗಿ ಚೇಸ್ ಮಾಡಿತು. ವೆಂಕಟೇಶ್ ಅಯ್ಯರ್ ನಿರಾಯಾಸವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಬುಧಾಬಿಯ ಆ ಪಂದ್ಯದಲ್ಲಿ ಅವರ ಆಡಿದ ರೀತಿ ಅನೇಕರನ್ನ ಅಚ್ಚರಿಗೊಳಿಸಿತ್ತು. ಇದು ವೆಂಕಟೇಶ್ ಅಯ್ಯರ್ಗೆ ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು. ಈ ದೊಡ್ಡ ವೇದಿಕೆಯಲ್ಲಿ ಆರ್ಸಿಬಿಯ ಪ್ರಬಲ ಬೌಲರ್ಗಳನ್ನ ಅಯ್ಯರ್ ಲೀಲಾಜಾಲವಾಗಿ ಎದುರಿಸಿದ್ದರು. ಇಷ್ಟು ದಿನ ಈ ಪ್ರತಿಭೆ ಎಲ್ಲಿ ಅಡಗಿತ್ತು ಎಂದು ಹಲವರು ಪ್ರಶ್ನೆ ಮಾಡಿಕೊಂಡಿದ್ದಿರಬಹುದು.
Not One Day Star- ವೆಂಕಟೇಶ್ ಅಯ್ಯರ್ ದಿಢೀರ್ ಸ್ಟಾರ್ ಆದವರಲ್ಲ. ಸಾಕಷ್ಟು ವರ್ಷ ಕ್ರಿಕೆಟ್ ಆಡಿ ಪಳಗಿದವರು. ಅಂಡರ್-12 ವಯೋಮಾನದ ಕ್ರಿಕೆಟ್ನಿಂದ ಮೇಲೇರುತ್ತಾ ಬಂದ ಉಜ್ವಲ ಪ್ರತಿಭೆ ಅವರು. ಮಧ್ಯಪ್ರದೇಶದ ಕ್ರಿಕೆಟ್ ಅನ್ನ ಹತ್ತಿರದಿಂದ ಬಲ್ಲವರಿಗೆ ವೆಂಕಟೇಶ್ ಅಯ್ಯರ್ ಹೆಸರು ಚಿರಪರಿಚಿತ. ಇವರಿಗೆ ಆರ್ಸಿಬಿ ವಿರುದ್ಧ ಅಯ್ಯರ್ ಆಡಿದ ರೀತಿ ಅಚ್ಚರಿ ಮೂಡಿಸುವುದಿಲ್ಲ. ಇದು ಅವರಿಗೆ ನಿರೀಕ್ಷಿತವೇ. ಅಯ್ಯರ್ ಐಪಿಎಲ್ ಪದಾರ್ಪಣೆಗೆ ಮುಂಚೆಯೇ ತಮ್ಮ ಅದ್ಭುತ ಪ್ರತಿಭೆಯನ್ನ ಕ್ರಿಕೆಟ್ ಲೋಕಕ್ಕೆ ಪರಿಚಯಿಸಿಕೊಟ್ಟಾಗಿತ್ತು.
Venkatesh Iyer breaks Warner’s record: ವೆಂಕಟೇಶ್ ಅಯ್ಯರ್ ಎಡಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಸ್ಪಿನ್ ಬೌಲರ್. ಇವರ ಸ್ಟ್ರೋಕ್ ಪ್ಲೇ ವೈವಿಧ್ಯಮಯವಾಗಿರುವುದರ ಜೊತೆಗೆ ಮನಮೋಹಕವೂ ಇದೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇವರು 146 ಎಸೆತದಲ್ಲಿ 198 ರನ್ ಗಳಿಸಿದರು. ಇದು ದೇಶೀಯ ಕ್ರಿಕೆಟ್ನ 50 ಓವರ್ಗಳ ಪಂದ್ಯವಾಗಿದ್ದು ಲಿಸ್ಟ್ ಎ ಕೆಟಗರಿಗೆ ಸೇರುತ್ತದೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಇವರದ್ದಾಯಿತು. ಡೇವಿಡ್ ವಾರ್ನರ್ ಅವರು 197 ರನ್ ಗಳಿಸಿದ ದಾಖಲೆಯನ್ನ ಅಯ್ಯರ್ ಮುರಿದುಹಾಕಿದ್ದರು. ಆ ಪಂದ್ಯದಲ್ಲಿ ಅಯ್ಯರ್ ಅವರು ಎರಡು ವಿಕೆಟ್ ಅನ್ನೂ ಪಡೆದು ಆಲ್ರೌಂಡ್ ಆಟ ಪ್ರದರ್ಶಿಸಿದ್ದರು.
Good in Academics: ವೆಂಕಟೇಶ್ ಅಯ್ಯರ್ ಕೇವಲ ಆಟದಲ್ಲಿ ಮಾತ್ರವಲ್ಲ ಓದಿನಲ್ಲೂ ಮುಂದಿದ್ದವರು. ಅವರ ಪ್ರಕಾರ ಕ್ರಿಕೆಟ್ಗಿಂತ ಅವರು ಓದಿನಲ್ಲೇ ಬ್ರಿಲಿಯಂಟ್ ಅಂತೆ. ಇವರು ಸಿಎ ಇಂಟರ್ ಪರೀಕ್ಷೆ ಪಾಸಾಗಿರುವುದು ಇವರ ಓದಿನ ಪ್ರತಿಭೆಗೆ ಸಾಕ್ಷಿ. ಎಂಬಿಎ ಕೂಡ ಮಾಡಿದ್ದಾರೆ. ಇವರು ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಡದೇ ಹೋಗಿದ್ದರೆ ಐಐಟಿಯೋ ಅಥವಾ ಐಐಎಂಗೋ ಸೇರುತ್ತಿದ್ದರಂತೆ.
Domestic Cricket: ಓದು ಮತ್ತು ಆಟ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದ 26 ವರ್ಷದ ಅಯ್ಯರ್ ಅವರು ಹೆಚ್ಚು ಪಂದ್ಯಗಳನ್ನ ಆಡಲು ಸಾಧ್ಯವಾಗಿಲ್ಲ. ರಣಜಿ ಕ್ರಿಕೆಟ್ನಲ್ಲಿ 15 ಇನ್ನಿಂಗ್ಸ್ ಆಡಿರುವ ಅವರು 36.33 ಸರಾಸರಿಯಂತೆ 545 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ 849 ರನ್ ಗಳಿಸಿರುವ ಇವರು 47.16 ಸರಾಸರಿ ಹೊಂದಿದ್ದಾರೆ. ಸ್ಟ್ರೈಕ್ ರೇಟ್ ಬಹುತೇಕ ನೂರು ಇದೆ. ಕ್ಷಿಪ್ರಗತಿಯಲ್ಲಿ ರನ್ ಗಳಿಸುವ ಛಾತಿ ಇವರಿಗೆ ಐಪಿಎಲ್ನಲ್ಲಿ ಸ್ವಾಭಾವಿಕವಾಗಿಯೇ ಬಾಗಿಲು ತೆರೆದಿದೆ.
How Iyer got noticed?: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಲ್ಲಿ ನಾಯಕಸ್ಥಾನದವರೆಗೆ ಬೆಳೆಯಲು ಪ್ರಮುಖವಾಗಿ ಬೆಂಬಲಕ್ಕೆ ಬಂದವರು ಆಗಿನ ಸೆಲೆಕ್ಷನ್ ಕಮಿಟಿಯ ಸದಸ್ಯ ಸಂಜಯ್ ಜಗದಾಳೆ ಅವರು. ಇದೇ ಸಂಜಯ್ ಅವರೇ ವೆಂಕಟೇಶ್ ಅವರನ್ನ ಗುರುತಿಸಿ ಮುನ್ನೆಲೆಗೆ ತಂದಿದ್ದು. ಅಯ್ಯರ್ ಅವರಲ್ಲಿ ಅಗಾಧ ಕ್ರಿಕೆಟ್ ಪ್ರತಿಭೆ ಇತ್ತಾದರೂ ಅವರಿಗೆ ಫಿಟ್ನೆಸ್ ಸಮಸ್ಯೆ ಇತ್ತು. ಕಳೆದ ಎರಡು ವರ್ಷದಲ್ಲಿ ಸಾಕಷ್ಟು ವರ್ಕೌಟ್ ಮಾಡಿ ಫಿಟ್ ಆಗಿದ್ದಾರೆ. ಓದಿನಲ್ಲೂ ಒಳ್ಳೆಯ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಅದೇ ಆತ್ಮವಿಶ್ವಾಸವು ಅವರ ಆಟದಲ್ಲಿ ಮೈಗೂಡಿದೆ ಎಂದು ಸಂಜಯ್ ಜಗದಾಳೆ ಹೇಳುತ್ತಾರೆ.
When Iyer in Team India?: ಸಂಜಯ್ ಜಗದಾಳೆಯಂತಹ ಪ್ರಭಾವಿ ವ್ಯಕ್ತಿ ವೆಂಕಟೇಶ್ ಅಯ್ಯರ್ ಪ್ರತಿಭೆ ಗುರುತಿಸಿರುವಾಗ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುವುದು ಕಷ್ಟವಾಗುವುದಿಲ್ಲ. ಆದರೆ, ಜಗದಾಳೆ ಮನಸಲ್ಲಿ ಬೇರೆ ಐಡಿಯಾ ಇದೆ. ಅಯ್ಯರ್ನನ್ನು ಏಕ್ದಂ ಟೀಮ್ ಇಂಡಿಯಾಗೆ ಸೇರಿಸಬಾರದು. ನಾನು ಆತನಿಗೆ ಒಳ್ಳೆಯ ಅವಕಾಶಗಳನ್ನ ನೀಡುತ್ತೇನೆ. ಆತ ಒಳ್ಳೆಯ ಪ್ರಾಕೇಜ್. ಚುಟುಕು ಕ್ರಿಕೆಟ್ಗೆ ಇಂಥ ಆಟಗಾರರ ಅಗತ್ಯತೆ ಇದೆ. ಅಯ್ಯರ್ ಬಗ್ಗೆ ನನಗೆ ಹೆಚ್ಚು ಇಷ್ಟವಾಗಿದ್ದು, ಆತ ತನ್ನ ಆಟದಲ್ಲಿರುವ ಕೊರತೆಯನ್ನ ನೀಗಿಸಿಕೊಳ್ಳುವುದರತ್ತ ಹೆಚ್ಚು ಗಮನ ಕೊಡುತ್ತಾನೆ. ಇದು ನನ್ನ ಗಮನ ಸೆಳೆಯಿತು ಎಂಬುದು ಜಗದಾಳೆ ಅನಿಸಿಕೆ.