Harshal Patel- ಹರ್ಷಲ್ ಪಟೇಲ್: ಇವರು ಈ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ. 14 ಪಂದ್ಯಗಳಿಂದ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆರ್ಸಿಬಿ ತಂಡದ ಇವರ ಸ್ಲೋ ಬಾಲ್ಗಳು ಈ ಐಪಿಎಲ್ನಲ್ಲಿ ಸಖತ್ತಾಗಿ ವರ್ಕೌಟ್ ಆಗಿವೆ. ಪವರ್ ಪ್ಲೇನಲ್ಲಿ ತುಸು ದುಬಾರಿ ಎನಿಸಿದರೂ ಡೆತ್ ಬೌಲಿಂಗ್ನಲ್ಲಿ ಇವರ ನಿಯಂತ್ರಣ ಅದ್ಭುತ. ಭಾರತ ತಂಡಕ್ಕೆ ಇವರ ಸೇರ್ಪಡೆ ದಿನಗಳು ದೂರ ಇಲ್ಲ.
KS Bharat- ಕೆಎಸ್ ಭರತ್: ಆಂಧ್ರ ಪ್ರದೇಶ ರಾಜ್ಯದ ಕೋನಾ ಶ್ರೀಕರ್ ಭರತ್ ಅವರು ಈಗ ಆರ್ಸಿಬಿಯ ಹೊಸ ಸ್ಟಾರ್ ಬ್ಯಾಟರ್ ಎನಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಸಂಜು ಸ್ಯಾಮ್ಸನ್, ರಿಷಭ್ ಪಂತ್, ಇಶಾನ್ ಕಿಶನ್ ಮೊದಲಾದವರ ಸಾಲಿಗೆ ಈಗ ಕೆಎಸ್ ಭರತ್ ಸೇರುತ್ತಿದ್ದಾರೆ. ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರ್ಸಿಬಿ ತಂಡಕ್ಕೆ ಇವರ ಸ್ಥಿರ ಪ್ರದರ್ಶನ ನೆರವಿಗೆ ಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ಫಿನಿಶರ್ ಕೂಡ ಆಗಿದ್ದಾರೆ. ಟೀಮ್ ಇಂಡಿಯಾದ ಆಯ್ಕೆಗಾರರ ಗಣನೆಯಲ್ಲಿ ಇವರೂ ಇರಲಿದ್ದಾರೆ.
Avesh Khan- ಅವೇಶ್ ಖಾನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ಧಾರೆ. ಪಂದ್ಯದ ಯಾವುದೇ ಸಂದರ್ಭದಲ್ಲೂ ಯಾವುದೇ ಪಿಚ್ನಲ್ಲೂ ಇವರು ಪರಿಣಾಮಕಾರಿ ಎನಿಸಿದ್ದಾರೆ. ಕಗಿಸೋ ರಬಡ, ಆನ್ರಿಕ್ ನೋರ್ಟಿಯಾರಂಥ ಅಸಾಮಾನ್ಯ ವೇಗಿಗಳಿಗಿಂತಲೂ ಹೆಚ್ಚು ಯಶಸ್ಸು ಕಂಡಿದ್ದಾರೆ. ಇವರಿಗೆ ಶೀಘ್ರದಲ್ಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತದೆಂದು ನಿರೀಕ್ಷಿಸಬಹುದು.
Venkatesh Iyer- ವೆಂಕಟೇಶ್ ಅಯ್ಯರ್: ಮಧ್ಯಪ್ರದೇಶದ ಈ ಆಲ್ರೌಂಡರ್ ಈಗ ಕೋಲ್ಕತಾ ನೈಟ್ ರೈಡರ್ಸ್ನ ದಿಕ್ಕು ದೆಶೆಯನ್ನೇ ಬದಲಿಸಿದ ಆಟಗಾರನೆನಿಸಿದ್ಧಾರೆ. ಏಳು ಪಂದ್ಯಗಳಿಂದ 239 ರನ್ ಗಳಿಸಿರುವ ವೆಂಕಟೇಶ್ ಅಯ್ಯರ್ ಅವರದ್ದು ಅಗಾಧ ಬ್ಯಾಟಿಂಗ್ ಪ್ರತಿಭೆ. ಮಧ್ಯಮ ವೇಗದ ಬೌಲರ್ ಕೂಡ ಹೌದು. ಭಾರತದಲ್ಲಿ ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಬಲ್ಲ ಆಲ್ರೌಂಡರ್ಗಳ ಕೊರತೆ ನೀಗಿಸಲು ಇವರು ಹಾರ್ದಿಕ್ ಪಾಂಡ್ಯ ಜೊತೆ ಪೈಪೋಟಿಗೆ ಇಳಿಯಬಹುದು.
Arshdeep Singh- ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ ತಂಡದ ಅರ್ಷ್ದೀಪ್ ಸಿಂಗ್ ಎಡಗೈ ವೇಗದ ಬೌಲರ್. 12 ಪಂದ್ಯಗಳಿಂದ 18 ವಿಕೆಟ್ ಪಡೆದಿರುವ ಅರ್ಶದೀಪ್ ಅವರು ತಮ್ಮ ವೇಗದ ಬೌಲಿಂಗ್ನಿಂದ ಅನೇಕ ಬ್ಯಾಟರ್ಗಳನ್ನ ಕಂಗೆಡಿಸಿದ್ದಾರೆ. ಭಾರತದಲ್ಲಿ ಎಡಗೈ ವೇಗಿಗಳ ಸಂಖ್ಯೆ ತೀರಾ ಕಡಿಮೆಯೂ ಇದೆ. ಅರ್ಶದೀಪ್ ಸಿಂಗ್ ಅವರಂಥ ಉಜ್ವಲ ಪ್ರತಿಭೆಗೆ ಭಾರತ ತಂಡದ ಕದ ಆದಷ್ಟೂ ಬೇಗ ಸಿಗುವ ಎಲ್ಲಾ ಸಾಧ್ಯತೆ ಇದೆ.