ಈ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಇವರು ಆಡಿದ್ದು ನಾಲ್ಕು ಪಂದ್ಯ ಮಾತ್ರ. ಮೊದಲ ಪಂದ್ಯದಲ್ಲೇ ಇವರು 17 ಎಸೆತದಲ್ಲಿ 43 ರನ್ ಚಚ್ಚಿದರು. ಬರೋಬ್ಬರಿ ನಾಲ್ಕು ಸಿಕ್ಸರ್ಗಳು ಇವರ ಬ್ಯಾಟಿಂದ ಚಿಮ್ಮಿದ್ದವು. ದುರದೃಷ್ಟವೆಂದರೆ ಅದೊಂದೇ ಪಂದ್ಯದಲ್ಲಿ ಇವರು ಅಷ್ಟು ಆರ್ಭಟ ತೋರಲು ಸಾಧ್ಯವಾಗಿದ್ದು. ನಂತರ ಮೂರು ಪಂದ್ಯಗಳಲ್ಲಿ ಇವರಿಂದ ಗಮನಾರ್ಹ ಪ್ರದರ್ಶನ ಬರಲಿಲ್ಲ. ಒಟ್ಟು ನಾಲ್ಕು ಪಂದ್ಯಗಳಿಂದ 73 ಬಾಲ್ನಲ್ಲಿ ಇವರು 94 ರನ್ ಗಳಿಸಿದ್ದಾರೆ. ಆದರೆ, 6 ಸಿಕ್ಸರ್ ಹಾಗೂ ಒಂದು ಬೌಂಡರಿಯನ್ನೂ ಸಿಡಿಸಿದ್ದಾರೆ.
ಅಜ್ಜಿಯಿಂದ ಬೆಳೆದ ಕ್ರಿಕೆಟಿಗ: ಮಹಿಪಾಲ್ ಲೊಮ್ರೋರ್ ಅವರು ರಾಜಸ್ಥಾನದ ನಾಗೌರ್ನವರು. ಚಿಕ್ಕಂದಿನಿಂದಲೇ ಕ್ರಿಕೆಟಿಗನಾಗಬೇಕೆಂದು ಕನಸು ಕಂಡು ಬೆಳೆದವರು. ಅಜ್ಜಿ ಸಿಂಗಾರಿ ದೇವಿ ಅವರಿಂದ ಮಹಿಪಾಲ್ಗೆ ಬಹಳಷ್ಟು ನೆರವು ಪಡೆದಿದ್ದಾರೆ. ಮಹಿಪಾಲ್ ಚಿಕ್ಕ ಹುಡುಗನಿದ್ದಾಗ ಅಜ್ಜಿ ಒಂದು ಬ್ಯಾಟ್ ತಂದುಕೊಡುತ್ತಾರೆ. ಅದು ಸಿಕ್ಕಿದ್ದೇ ತಡ ತನ್ನ ಮನೆಯ ಮುಂಭಾಗದ ರಸ್ತೆಯನ್ನೇ ಕ್ರಿಕೆಟ್ ಗ್ರೌಂಡ್ ಆಗಿ ಮಾಡಿಕೊಂಡ ಮಹಿಪಾಲ್, ತನ್ನ ತಂಗಿಯಿಂದ ಬೌಲಿಂಗ್ ಮಾಡಿಸಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದರಂತೆ. ಹಾಗಂತ ಸಿಂಗಾರಿ ದೇವಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ಧಾರೆ.
ಮಹಿಪಾಲ್ ಲೊಮ್ರೋರ್ ಮತ್ತು ರಿಷಭ್ ಪಂತ್ ಇಬ್ಬರೂ ಜೂನಿಯರ್ ಕ್ರಿಕೆಟ್ನಲ್ಲಿ ಒಂದೇ ತಂಡದಲ್ಲಿದ್ದವರು. ರಾಜಸ್ಥಾನದ ಅಂಡರ್-14 ಮತ್ತು ಅಂಡರ್-16 ತಂಡಗಳಲ್ಲಿ ಇಬ್ಬರೂ ಒಟ್ಟಿಗೆ ಆಡಿದ್ದಾರೆ. ನಂತರದ ದಿನಗಳಲ್ಲಿ ಪಂತ್ ಅವರು ದೆಹಲಿಗೆ ವಲಸೆ ಹೋಗುತ್ತಾರೆ. ಲೊಮ್ರೋರ್ ಅವರು 19ನೇ ವಯಸ್ಸಿಗೆ ರಾಜಸ್ಥಾನ್ ತಂಡದ ನಾಯಕರಾಗುತ್ತಾರೆ. ಮಹಿಪಾಲ್ಗೆ ಕ್ರಿಕೆಟ್ನಲ್ಲಿ ರೋಲ್ ಮಾಡೆಲ್ ಎಂದರೆ ಆಸ್ಟ್ರೇಲಿಯಾದ ಲೆಜೆಂಡ್ ಅಡಂ ಗಿಲ್ಕ್ರಿಸ್ಟ್. ಆದರೆ, ಬೌಲಿಂಗ್ನಲ್ಲಿ ಇವರಿಗೆ ರವೀಂದ್ರ ಜಡೇಜಾ ಹೀರೋ.