IPL 2021 and T20 World Cup- ಐಪಿಎಲ್ 2021ನ ದ್ವಿತೀಯಾರ್ಧದ ಪಂದ್ಯಗಳು ಯುಎಇಯಲ್ಲಿ ನಡೆಯುತ್ತಿವೆ. ಐಪಿಎಲ್ ಮುಗಿದ ಬಳಿಕ ಇಲ್ಲಿಯೇ ಟಿ20 ವಿಶ್ವಕಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯುಎಇಯ ಪಿಚ್ಗಳಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರ ಪ್ರದರ್ಶನ ಹೇಗಿದೆ ಎಂಬುದನ್ನು ಈಗ ಅವಲೋಕಿಸಬಹುದು. ಯುಎಇಯಲ್ಲಿ ಮೂರು ಸುತ್ತುಗಳ ಪಂದ್ಯಗಳು ಈಗಾಗಲೇ ನಡೆದುಹೋಗಿವೆ. ಇನ್ನು ನಾಲ್ಕು ಸುತ್ತುಗಳಷ್ಟೇ ಬಾಕಿ ಇವೆ. ಹೀಗಾಗಿ, ವಿಶ್ವಕಪ್ ಆರಂಭಕ್ಕೆ ಮುನ್ನ ಟೀಮ್ ಇಂಡಿಯಾದ 15 ಆಟಗಾರರ ಫಾರ್ಮ್ ಐಪಿಎಲ್ನಲ್ಲಿ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
Virat Kohli- ವಿರಾಟ್ ಕೊಹ್ಲಿ: 3 ಇನ್ನಿಂಗ್ಸ್ 109 ರನ್ – ಆರ್ಸಿಬಿ ಕ್ಯಾಪ್ಟನ್ಸಿ ತೊರೆಯುವ ನಿರ್ಧಾರ ವಿರಾಟ್ ಕೊಹ್ಲಿಗೆ ವರವಾಗುತ್ತಿರುವಂತೆ ತೋರುತ್ತಿದೆ. ಎರಡನೇ ಲೆಗ್ನಲ್ಲಿ ಅವರು ಆಡಿರುವ ಮೂರು ಪಂದ್ಯಗಳಿಂದ ಎರಡು ಅರ್ಧಶತಕಗಳನ್ನ ಸಿಡಿಸಿದ್ದಾರೆ. ಇನ್ನಿಂಗ್ಸ್ ಓಪನ್ ಮಾಡುತ್ತಿರುವ ಅವರು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಇದು ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಶುಭ ಸೂಚನೆಯಾಗಿದೆ. ಐಪಿಎಲ್ನಲ್ಲಿ ಆರಂಭಿಕ ಬ್ಯಾಟರ್ ಆಗಿ ಇವರು ಸ್ಥಿರ ಪ್ರದರ್ಶನ ತೋರಿದ್ದೇ ಆದಲ್ಲಿ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಇನ್ನಿಂಗ್ಸ್ ಓಪನ್ ಮಾಡಿದರೂ ಅಚ್ಚರಿ ಇಲ್ಲ.
Rohit Sharma- ರೋಹಿತ್ ಶರ್ಮಾ: 2 ಇನ್ನಿಂಗ್ಸ್ 76 ರನ್- ಇಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಎರಡು ಪಂದ್ಯಗಳಿಂದ ಗಳಿಸಿರುವ ರನ್ ಮೊತ್ತ ಪರಿಗಣಿಸಿದರೆ ಪರವಾಗಿಲ್ಲ ಎನಿಸುತ್ತದೆ. ಆದರೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು 33 ರನ್ ಗಳಿಸಿದರೂ ಅದು ಆತ್ಮವಿಶ್ವಾಸದಿಂದ ಕೂಡಿದ ಆಟವಾಗಿರಲಿಲ್ಲ. ಆದರೆ, ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಅವರು ತಂಡದ ಟಾಪ್ ಸ್ಕೋರರ್ ಎನಿಸಿದರು. ಅವರು ಮತ್ತೆ ಲಯಕ್ಕೆ ಮರಳುತ್ತಿರುವ ಸೂಚನೆ ಇದೆ. ಮುಂದಿನ ಪಂದ್ಯಗಳಲ್ಲಿ ಇದು ಉತ್ತಮಗೊಳ್ಳುತ್ತಾ ಹೋಗುತ್ತಾ ಎಂದು ನೋಡಬೇಕು.
Suryakumar yadav- ಸೂರ್ಯಕುಮಾರ್ ಯಾದವ್: 3 ಇನ್ನಿಂಗ್ಸ್ 16 ರನ್- ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಡಬಲ್ ಡಿಜಿಟ್ ಸ್ಕೋರ್ ಮಾಡಿಲ್ಲ. ಇದು ಟಿ20 ವಿಶ್ವಕಪ್ಗೆ ಭಾರತಕ್ಕೆ ಕಳವಳಕಾರಿ ಎನಿಸಬಹುದಾದ ಅಂಶ. ಆದರೆ, ಎಸ್ಕೆ ಯಾದವ್ ಅನೇಕ ಬಾರಿ ಫೀನಿಕ್ಸ್ನಂತೆ ಪುಟಿದೆದ್ದಿರುವ ನಿದರ್ಶನಗಳಿವೆ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಇನ್ನೂ ನಾಲ್ಕು ಐಪಿಎಲ್ ಪಂದ್ಯಗಳನ್ನ ಯಾದವ್ ಆಡುವುದಿದೆ. ಅವುಗಳಲ್ಲಿ ಅವರು ಲಯ ಕಂಡುಕೊಳ್ಳಲು ಅವಕಾಶವಂತೂ ಇದೆ.
Rishabh Pant- ರಿಷಭ್ ಪಂತ್: 2 ಇನ್ನಿಂಗ್ಸ್ 59 ರನ್- ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಹೆಚ್ಚು ಸ್ಕೋರು ಗಳಿಸದಿದ್ದರೂ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನವಂತೂ ನೀಡಿಲ್ಲ. ಒಂದು ಪಂದ್ಯದಲ್ಲಿ 21 ಬಾಲ್ನಲ್ಲಿ 35 ರನ್ ಗಳಿಸಿದ್ದರು. ಅದರು ಅವರ ಆಕರ್ಷಕ ಬ್ಯಾಟಿಂಗ್ಗೆ ದ್ಯೋತಕವಾಗಿದೆ. ಮತ್ತೊಂದು ಪಂದ್ಯದಲ್ಲೂ ಅವರು ಕರಾರುವಾಕ್ ಬೌಲಿಂಗ್ ದಾಳಿ ಎದುರು 24 ರನ್ ಗಳಿಸಿ ಗಮನ ಸೆಳೆದಿದ್ದರು.
Ishan Kishan- ಇಶಾನ್ ಕಿಶನ್: 3 ಇನ್ನಿಂಗ್ಸ್ 34 ರನ್- ಸಂಜು ಸ್ಯಾಮ್ಸನ್ ಅವರನ್ನ ಹಿಂದಿಕ್ಕಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಇಶಾನ್ ಕಿಶನ್ ಅವರು ಐಪಿಎಲ್ ಎರಡನೇ ಲೆಗ್ನಲ್ಲಿ ಒತ್ತಡದಲ್ಲಿದ್ದಂತಿದೆ. ಮೂರು ಪಂದ್ಯಗಳಿಂದ ಅವರು ಗಳಿಸಿರುವುದು ಕೇವಲ 34 ರನ್ ಮಾತ್ರ. ಆರ್ಸಿಬಿ ಎದುರು ಸೋತ ಪಂದ್ಯದಲ್ಲಿ ಅವರು ಅಕ್ಷರಶಃ ಕಣ್ಣೀರಾಕಿದ್ದರು. ಕೊನೆಗೆ ಅವರನ್ನ ವಿರಾಟ್ ಕೊಹ್ಲಿ ಸಂತೈಸಬೇಕಾಯಿತು. ಅಷ್ಟೇ ಅಲ್ಲ, ಈ ಸೀಸನ್ನ ಇಡೀ ಐಪಿಎಲ್ನಲ್ಲಿ ಅವರು 8 ಪಂದ್ಯಗಳಿಂದ ಗಳಿಸಿರುವ ರನ್ ಕೇವಲ 107 ಮಾತ್ರ. ಇದು ನಿಜಕ್ಕೂ ಕಳವಳಕಾರಿ ಎನಿಸುವ ಅಂಶ.
Hardik Pandya- ಹಾರ್ದಿಕ್ ಪಾಂಡ್ಯ: 1 ಇನ್ನಿಂಗ್ಸ್ 4 ರನ್, 0 ವಿಕೆಟ್- ಯುಎಇ ಲೆಗ್ ಐಪಿಎಲ್ ಶುರುವಾಗುವ ಮುನ್ನ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ಪ್ರವಾಸದಲ್ಲಿ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದರು. ಅಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅವರಿಗೆ ಫಿಟ್ನೆಸ್ ಸಮಸ್ಯೆ ಇದ್ದಂತಿದೆ. ಯುಎಇಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಮೊದಲೆರಡು ಪಂದ್ಯಗಳಲ್ಲಿ ಪಾಂಡ್ಯಗೆ ಅವಕಾಶ ಸಿಗಲಿಲ್ಲ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 4 ರನ್ ಗಳಿಸಿದರು. ಬೌಲಿಂಗ್ ಮಾಡಲೇ ಇಲ್ಲ. ಇದು ಅವರಿಗೆ ಫಿಟ್ನೆಸ್ ಸಮಸ್ಯೆ ಇರುವುದರ ಕುರುಹು ಇರಬಹುದು.
Ravindra Jadeja- ರವೀಂದ್ರ ಜಡೇಜಾ: 2 ಇನ್ನಿಂಗ್ಸ್ 48 ರನ್, 1 ವಿಕೆಟ್- ಭಾರತದ ಪ್ರಮುಖ ಆಲ್ರೌಂಡರ್ಗಳಲ್ಲಿ ಒಬ್ಬರೆನಿಸಿರುವ ರವೀಂದ್ರ ಜಡೇಜಾ ಒಳ್ಳೆಯ ಲಯದಲ್ಲಿರುವುದಕ್ಕೆ ಸಿಎಸ್ಕೆಯ ಎರಡು ಪಂದ್ಯಗಳು ಸಾಕ್ಷಿಯಾಗಿವೆ. ಮೊದಲ ಪಂದ್ಯದಲ್ಲಿ ಅವರು ತಂಡ ಸಂಕಷ್ಟದಲ್ಲಿರುವಾಗ ಉತ್ತಮವಾಗಿ ಬ್ಯಾಟ್ ಮಾಡಿ 26 ರನ್ ಗಳಿಸಿದ್ದರು. ಇನ್ನು, ಕೆಕೆಆರ್ ವಿರುದ್ಧ ಸೋಲಿನಂಚಿನಲ್ಲಿದ್ದ ಸ್ಥಿತಿಯಲ್ಲಿ 8 ಬಾಲ್ನಲ್ಲಿ 22 ರನ್ ಚಚ್ಚಿ ಪಂದ್ಯದ ಚಹರೆಯನ್ನೇ ಬದಲಿಸಿದ್ದರು ಜಡೇಜಾ. ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವ ಇವರು ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ಪಂದ್ಯಕ್ಕೆ ತಿರುವು ತಂದುಕೊಡಬಲ್ಲವರಾಗಿದ್ದಾರೆ. ಬೌಲಿಂಗ್ನಲ್ಲೂ ಇವರು ದುಬಾರಿ ಎನಿಸಿಲ್ಲ.
Rahul Chahar- ರಾಹುಲ್ ಚಾಹರ್: 3 ಇನ್ನಿಂಗ್ಸ್ 1 ವಿಕೆಟ್- ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ರಾಹುಲ್ ಚಾಹರ್ ಅವರು ಯುಎಇಯಲ್ಲಿ ನಡೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ಧಾರೆ. ಸಿಎಸ್ಕೆ ವಿರುದ್ಧದ ಪಂದ್ಯ ಬಿಟ್ಟು ಉಳಿದೆರಡು ಪಂದ್ಯದಲ್ಲಿ ದುಬಾರಿ ಎನಿಸಿದ್ದಾರೆ. ಮೂರೂ ಪಂದ್ಯಗಳಿಂದ ಇವರು ಗಳಿಸಿರುವುದು ಕೇವಲ ಒಂದು ವಿಕೆಟ್ ಮಾತ್ರ.
Varun Chakravarthy- ವರುಣ್ ಚಕ್ರವರ್ತಿ: 3 ಇನ್ನಿಂಗ್ಸ್ 3 ವಿಕೆಟ್- ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸ್ಪಿನ್ ಬೌಲರ್ಗಳಲ್ಲಿ ವರುಣ್ ಚಕ್ರವರ್ತಿ ಬೆಸ್ಟ್ ಎಂಬುದಕ್ಕೆ ಮೂರು ಐಪಿಎಲ್ ಪಂದ್ಯಗಳು ಸಾಕ್ಷಿಯಾಗಿವೆ. ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ 13 ರನ್ಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದರು. ಉಳಿದೆರಡು ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಬೀಳದಿದ್ದರೂ ರನ್ ಗತಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ಧಾರೆ. ಇದು ಭಾರತ ತಂಡಕ್ಕೆ ಶುಭ ಸೂಚನೆ.
Jasprit Bumrah- ಜಸ್ಪ್ರೀತ್ ಬುಮ್ರಾ: 3 ಇನ್ನಿಂಗ್ಸ್ 8 ವಿಕೆಟ್: ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಭಾರತದ ಬೆಸ್ಟ್ ಬೌಲರ್ ಎಂಬ ಹಣೆಪಟ್ಟಿಯನ್ನು ಸತತವಾಗಿ ಉಳಿಸಿಕೊಂಡು ಬರುತ್ತಿದ್ದಾರೆ. ಯುಎಇಯ ಐಪಿಎಲ್ ಪಂದ್ಯಗಳಲ್ಲೂ ಇವರು ಅದನ್ನ ಸಾಬೀತು ಮಾಡಿ ತೋರಿಸಿದ್ದಾರೆ. 3 ಪಂದ್ಯಗಳಿಂದ 8 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ಧಾರೆ. ಆದರೆ, ಎಕನಾಮಿ ರೇಟ್ ಮಾತ್ರ ತುಸು ದುಬಾರಿಯಾಗಿದೆ.