Navnita Gautam- ನವನೀತಾ ಗೌತಮ್: ಯುಎಇಯಲ್ಲಿ ನಡೆದ ಆರ್ಸಿಬಿಯ ಪಂದ್ಯವೊಂದರಲ್ಲಿ ಈಕೆ ಆರ್ಸಿಬಿ ಆಟಗಾರರ ಪಕ್ಕ ಕೂತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಯಿತು. ಆರ್ಸಿಬಿ ಬೌಲರ್ ಕೈಲ್ ಜೇಮಿಸನ್ ಅವರು ಚೇಷ್ಠೆ ಮಾಡುವ ರೀತಿಯಲ್ಲಿ ನವನೀತಾ ಗೌತಮ್ ಅವರನ್ನ ನೋಡಿ ಮುಗುಳ್ನಗುತ್ತಿದ್ದ ದೃಶ್ಯ ಇದ್ದ ಫೋಟೋ ಅದು. ಆಕೆ ಯಾರೆಂದು ಜನರು ಹುಡುಕಾಡುವಷ್ಟರಲ್ಲಿ ಆಕೆ ಆರ್ಸಿಬಿ ತಂಡದ ಮಸಾಜ್ ಥೆರಪಿಸ್ಟ್ ಎಂಬುದು ಗೊತ್ತಾಯಿತು. 2019ರಿಂದಲೇ ಆರ್ಸಿಬಿ ತಂಡದೊಂದಿಗೆ ಈಕೆ ಕೆಲಸ ಮಾಡುತ್ತಾ ಬಂದಿದ್ಧಾರೆ. ಕೆನಡಾ ದೇಶದ ಈ ಚೆಲುವೆ ಅಲ್ಲಿನ ಕೆಲ ಸ್ಪೋರ್ಟ್ಸ್ ಟೀಮ್ಗಳ ಜೊತೆ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೂ ಈಕೆ ಸೇವೆ ನೀಡಿದ್ದಾರೆ.
Kaviya Maran- ಕಾವಿಯಾ ಮಾರನ್: ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಕ್ಯಾಮೆರಾ ಕಣ್ಣಿಗೆ ಹೆಚ್ಚು ಕುಕ್ಕುತ್ತಿದ್ದುದು ಹಾಗೂ ಟೀವಿ ವೀಕ್ಷಕರ ಕಣ್ಣು ಹೆಚ್ಚು ನೆಟ್ಟಿದ್ದು ಈ ಬೆಡಗಿಯ ಮೇಲೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಟೇಬಲ್ನಲ್ಲಿ ಕೂತು ಈಕೆ ಆಟಗಾರರಿಗೆ ಬಿಡ್ ಸಲ್ಲಿಸುತ್ತಿದ್ದುದನ್ನು ಕುತೂಹಲದ ಕಣ್ಣುಗಳು ಗಮನಿಸುತ್ತಲೇ ಇದ್ದವು. ಆದರೆ, ನಂತರ ಈಕೆ ಯಾರೆಂದು ಜಗಜ್ಜಾಹೀರಾಯಿತು ಬಿಡಿ. ತಮಿಳುನಾಡಿನ ಖ್ಯಾತ ರಾಜಕೀಯ ಕುಟುಂಬದ ಕುಡಿ ಈಕೆ. ಕಲಾನಿದಿ ಮಾರನ್ ಅವರ ಮಗಳು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಈಕೆ. ಕ್ರಿಕೆಟ್ ಈಕೆಗೆ ಪ್ಯಾಷನ್. ಇದರ ಜೊತೆಗೆ ಸನ್ ಟಿವಿ ಸಮೂಹಕ್ಕೆ ಸೇರಿದ ಸನ್ ಮ್ಯೂಸಿಕ್ ಮತ್ತು ವಿವಿಧ ಎಫ್ಎಂ ಚಾನೆಲ್ಗಳ ನಿರ್ವಹಣೆಯನ್ನ ಈಕೆ ನೋಡಿಕೊಳ್ಳುತ್ತಾರೆ. ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಗೆದ್ದಾಗ ಈಕೆ ಸಂಭ್ರಮಿಸುವ ರೀತಿ ನಿಜಕ್ಕೂ ಮನೋಜ್ಞವಾದುದು.
Sasha De Kock – ಸಶಾ ಡಿಕಾಕ್: ಹೆಸರು ನೋಡಿದಾಕ್ಷಣ ಈಕೆ ಕ್ಲಿಂಟನ್ ಡೀಕಾಕ್ ಅವರ ಪತ್ನಿ ಎಂದು ಯಾರು ಬೇಕಾದರೂ ಗುರುತಿಸಬಹುದು. ಕ್ಲಿಂಟನ್ ಡೀಕಾಕ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರ. ಈ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇ ಅವರ ಜೊತೆ ಸಶಾ ಡೀಕಾಕ್ ಸಾಕಷ್ಟು ಬಾರಿ ಕಾಣಿಸಿಕೊಂಡು ಪಂದ್ಯವನ್ನ ಎಂಜಾಯ್ ಮಾಡುತ್ತಿದ್ದ ದೃಶ್ಯ ಟಿವಿ ವೀಕ್ಷಕರಿಗೆ ಬಿದ್ದಿರಬಹುದು. ಸಶಾ ಡೀ ಕಾಕ್ ಬಗ್ಗೆ ಒಂದು ಕುತೂಹಲದ ವಿಚಾರವೂ ಇದೆ. ಈಕೆ ಡೀಕಾಕ್ ಅವರನ್ನ ವಿವಾಹವಾಗುವ ಮುನ್ನ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಚೀರ್ ಲೀಡರ್ ಆಗಿದ್ದರು. ಅಲ್ಲಿ ಡೀಕಾಕ್ ಅವರು ಆಡುತ್ತಿದ್ದ ಹೈವೆಲ್ಡ್ ಲಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ 2012ರಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಈಕೆ ಚಿಯರ್ ಲೀಡರ್ ಆಗಿದ್ದರು. ಆಗ ಕ್ವಿಂಟಾನ್ ಡೀಕಾಕ್ ಮತ್ತು ಸಶಾ ಹರ್ಲೆ ಅವರ ಪರಿಚಯ ಆಗಿ ಅದು ಪ್ರೇಮಕ್ಕೆ ತಿರುಗಿ ಕೊನೆಗೆ ವಿವಾಹದಲ್ಲಿ ಅಂತ್ಯಗೊಂಡಿದೆ.