ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಇಷ್ಟೇ ಗೆಲುವು ಕಂಡಿರುವ ಕೆಕೆಆರ್ 7ನೇ ಸ್ಥಾನವನ್ನು ಅಲಂಕರಿಸಿದೆ. ಇಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ತಂಡವು ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸುವ ಅರ್ಹತೆಗಿಟ್ಟಿಸಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಇನ್ನು ಕಳೆದ ಸೀಸನ್ನಲ್ಲಿನ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ, 2 ಮುಖಾಮುಖಿಯಲ್ಲಿ ರಾಜಸ್ಥಾನ್ ಒಂದು ಗೆದ್ದರೆ, ಮತ್ತೊಂದನ್ನು ಕೊಲ್ಕತ್ತಾ ಗೆದ್ದು ಬೀಗಿತ್ತು. ಹಾಗೆಯೇ 2014ರ ಯುಎಇ ಐಪಿಎಲ್ನಲ್ಲೂ ಉಭಯ ತಂಡಗಳು ಒಂದು ಪಂದ್ಯವನ್ನು ಆಡಿದೆ. ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತನ್ನ 20 ಓವರ್‌ಗಳಲ್ಲಿ 152/5 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಿದ್ದ ಕೆಕೆಆರ್ ಕೂಡ 152/8 ಬಾರಿಸಿತ್ತು. ಬಳಿಕ ಸೂಪರ್ ಓವರ್ನಲ್ಲೂ ಎರಡೂ ತಂಡಗಳು 11 ರನ್ ಬಾರಿಸಿದ್ದವು. ಹೀಗಾಗಿ ಬೌಂಡರಿ ಎಣಿಕೆ ನಿಯಮದಲ್ಲಿ ಕೊಲ್ಕತ್ತಾ ವಿರುದ್ಧ ರಾಜಸ್ಥಾನ್ನ್ನು ವಿಜಯಿ ಎಂದು ಘೋಷಿಸಲಾಯಿತು. ಹೀಗಾಗಿ ಇಂದಿನ ಪಂದ್ಯದಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.