ಡೇವಿಡ್ ವಾರ್ನರ್: ಐಪಿಎಲ್ ಇತಿಹಾಸದಲ್ಲಿ ಕಂಡ ಅತ್ಯಂತ ಯಶಸ್ವಿ ಬ್ಯಾಟರ್ ಮತ್ತು ಕ್ಯಾಪ್ಟನ್ಗಳಲ್ಲಿ ಡೇವಿಡ್ ವಾರ್ನರ್ ಒಬ್ಬರು. ಕಳೆದ ಸೀಸನ್ನಲ್ಲಿ ಇವರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದು ನಿಚ್ಚಳವಾಗಿತ್ತು. ವಾರ್ನರ್ ಫಾರ್ಮ್ ನಲ್ಲಿ ಇಲ್ಲ ಎಂಬ ಕಾರಣವೊಡ್ಡಿ ಅವರನ್ನ ಯುಎಇ ಲೆಗ್ನ ಕೊನೆಕೊನೆಯ ಪಂದ್ಯಗಳಲ್ಲಿ ಆಡಿಸಲೇ ಇಲ್ಲ. ಆದರೆ, ಟಿ20 ವಿಶ್ವಕಪ್ ನಲ್ಲಿ ವಾರ್ನರ್ ತಮ್ಮ ಉಜ್ವಲ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿದರು. ಇವರ ನಾಯಕತ್ವದಲ್ಲಿ ಹೈದರಾಬಾದ್ ಒಮ್ಮೆ ಐಪಿಎಲ್ ಪಟ್ಟ ಪಡೆಯುವಲ್ಲಿ ಸಫಲವಾಗಿತ್ತು. ಕ್ಯಾಪ್ಟನ್ ಮತ್ತು ಬ್ಯಾಟರ್ ಆಗಿರುವ ಡೇವಿಡ್ ವಾರ್ನರ್ ಅವರನ್ನ ಹೈದರಾಬಾದ್ ರಿಲೀಸ್ ಮಾಡಿರುವುದು ಇತರ ತಂಡಗಳಿಗೆ ಒಳ್ಳೆಯ ಅವಕಾಶ ಒದಗಿಸಿದೆ. ಹರಾಜಿನಲ್ಲಿ ಇವರಿಗೆ ಅತಿ ಹೆಚ್ಚು ಬೆಲೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಕೆಎಲ್ ರಾಹುಲ್: ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಕೆಎಲ್ ರಾಹುಲ್ ಕಳೆದ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಇವರದ್ದು ಅತ್ಯಮೋಘ ಫಾರ್ಮ್. ಕಳೆದ ಹಲವು ಸೀಸನ್ಗಳ ಐಪಿಎಲ್ ನಲ್ಲಿ ಇವರು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ಧಾರೆ. ಕ್ಯಾಪ್ಟನ್, ವಿಕೆಟ್ ಕೀಪರ್ ಮತ್ತು ಬ್ಯಾಟರ್ ಈ ಮೂರೂ ವಿಭಾಗಗಳನ್ನ ನಿಭಾಯಿಸಬಲ್ಲ ಇವರಿಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಇರಲಿದೆ.
ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕ್ಯಾಪ್ಟನ್ ಆಗಿದ್ದ ಶ್ರೇಯಸ್ ಅಯ್ಯರ್ ಗಾಯದ ಕಾರಣ ಕಳೆದ ಐಪಿಎಲ್ ನ ಮೊದಲ ಅವಧಿಯಲ್ಲಿ ಆಡಲಿಲ್ಲ. ಆಗ ರಿಷಭ್ ಪಂತ್ ಅವರಿಗೆ ಕ್ಯಾಪ್ಟನ್ಸಿ ಸಿಕ್ಕಿತು. ಕೊನೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶ್ರೇಯಸ್ ಅಯ್ಯರ್ ಬದಲು ಪಂತ್ ಅವರನ್ನ ಉಳಿಸಿಕೊಂಡಿದೆ. ಅಯ್ಯರ್ ಕ್ಯಾಪ್ಟನ್ ಆಗಿಯೂ ಭರವಸೆ ಮೂಡಿಸಿದ್ದಾರೆ. ಬ್ಯಾಟಿಂಗ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಇವರನ್ನ ಯಾವುದಾದರೂ ಒಂದು ತಂಡ ಒಳ್ಳೆಯ ಮೊತ್ತಕ್ಕೆ ಖರೀದಿಸಿ ಕ್ಯಾಪ್ಟನ್ ಆಗಿ ಮಾಡುವ ಚಾನ್ಸ್ ಹೆಚ್ಚಿದೆ.