ಐಪಿಎಲ್ನ 5ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ . ಉಭಯ ತಂಡಗಳು ಈಗಾಗಲೇ ತಲಾ ಒಂದು ಪಂದ್ಯವನ್ನಾಡಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಎಸ್ಆರ್ಹೆಚ್ ವಿರುದ್ದ ಗೆಲುವು ದಾಖಲಿಸಿದರೆ, ಮುಂಬೈ ಇಂಡಿಯನ್ಸ್ ಆರ್ಸಿಬಿ ವಿರುದ್ದ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯಲು ರೋಹಿತ್ ಶರ್ಮಾ ಪಡೆ ಸಕಲ ಸಿದ್ದತೆಯಲ್ಲಿದೆ.
ಉಭಯ ತಂಡಗಳ ನಡುವಣ ಕದನದ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಏಕೆಂದರೆ ಇದುವರೆಗೆ ಈ ತಂಡಗಳು 27 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ದಾಖಲಿಸಿರುವುದು ಕೇವಲ 6 ಬಾರಿ ಮಾತ್ರ. ಹಾಗೆಯೇ ಮುಂಬೈ ಇಂಡಿಯನ್ಸ್ 21 ಬಾರಿ ಜಯಗಳಿಸಿ ಕೆಕೆಆರ್ ವಿರುದ್ದ ಪಾರುಪತ್ಯ ಸಾಧಿಸಿದೆ. ಇನ್ನು ಕಳೆದ ಸೀಸನ್ ಐಪಿಎಲ್ನ ಎರಡೂ ಪಂದ್ಯಗಳಲ್ಲೂ ಮುಂಬೈ ಇಯಾನ್ ಮೋರ್ಗನ್ ಪಡೆಯನ್ನು ಬಗ್ಗು ಬಡಿದಿದೆ. ಅಲ್ಲದೆ ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಕೆಕೆಆರ್ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ.
ಇನ್ನು ಬ್ಯಾಟ್ಸ್ಮನ್ಗಳ ಪ್ರದರ್ಶನವನ್ನು ನೋಡಿದರೆ, ಕೆಕೆಆರ್ ವಿರುದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಹಿಟ್ಮ್ಯಾನ್ ಕಳೆದ ಹತ್ತು ಸೀಸನ್ಗಳಲ್ಲಿ ಕೆಕೆಆರ್ ವಿರುದ್ದ 823 ರನ್ ಬಾರಿಸಿರುವುದು ಇದಕ್ಕೆ ಸಾಕ್ಷಿ. ಇನ್ನು ಕೊಲ್ಕತ್ತಾ ಪರ ಮುಂಬೈ ವಿರುದ್ದ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದು ಗೌತಮ್ ಗಂಭೀರ್. 8 ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 349 ರನ್ ಕಲೆಹಾಕಿರುವ ಗೌತಿ ಪ್ರಸ್ತುತ ತಂಡದಲ್ಲಿಲ್ಲ ಎಂಬುದು ವಿಶೇಷ.
ಹಾಗೆಯೇ ಬೌಲರುಗಳ ವಿಭಾಗದಲ್ಲಿ ಕೆಕೆಆರ್ ತಂಡದ ಸುನೀಲ್ ನರೈನ್ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದ ನರೈನ್ ಇದುವರೆಗೆ 22 ವಿಕೆಟ್ ಕಬಳಿಸಿದ್ದಾರೆ. ಇನ್ನು ಕೆಕೆಆರ್ ವಿರುದ್ದ ಮುಂಬೈ ಬೌಲರ್ ಆಗಿದ್ದ ಲಸಿತ್ ಮಾಲಿಂಗ 20 ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡಿದ್ದರು. ಅದೇ ರೀತಿ ಪ್ರಸ್ತುತ ತಂಡದಲ್ಲಿರುವ ಬುಮ್ರಾ ಕೆಕೆಆರ್ ವಿರುದ್ದ 12 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಳೆದ ಸೀಸನ್ನಲ್ಲಿನ ಬ್ಯಾಟ್ಸ್ಮನ್ ಫಾರ್ಮ್ ಗಮಿಸಿದರೆ, ಇಶಾನ್ ಕಿಶನ್ (516), ಕ್ವಿಂಟನ್ ಡಿಕಾಕ್ (503) ಹಾಗೂ ಸೂರ್ಯಕುಮಾರ್ ಯಾದವ್ (480) ಟಾಪ್ ತ್ರಿ ಬ್ಯಾಟ್ಸ್ಮನ್ಗಳೆನಿಸಿಕೊಂಡಿದ್ದಾರೆ. ಹಾಗೆಯೇ ಬೌಲರುಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ (27), ಟ್ರೆಂಟ್ ಬೌಲ್ಟ್ (25) ಹಾಗೂ ಕೆಕೆಆರ್ ತಂಡದ ವರುಣ್ ಚಕ್ರವರ್ತಿ (17) ಟಾಪ್ 3 ಬೌಲರುಗಳಾಗಿದ್ದಾರೆ.
ಇಲ್ಲಿ ಆಟಗಾರರ ಕಳೆದ ಸೀಸನ್ನಲ್ಲಿನ ಪ್ರದರ್ಶನ ಹಾಗೂ ಒಟ್ಟಾರೆ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿರುವುದು ಸ್ಪಷ್ಟ. ಆದರೆ ಅತ್ತ ಎಸ್ಆರ್ಹೆಚ್ ವಿರುದ್ಧ ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿರುವ ಕೆಕೆಆರ್ ಮುಂಬೈಗೆ ಹೇಗೆ ಸವಾಲಾಗಲಿದೆ ಕಾದು ನೋಡಬೇಕಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಪರ ಕ್ರಿಸ್ ಲಿನ್ ಬದಲಾಗಿ ಕ್ವಿಂಟನ್ ಡಿಕಾಕ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇಂದು ಆಡಲಿರುವ ಪ್ಲೇಯಿಂಗ್ 11 ಹೀಗಿದೆ.