ಇನ್ನು ಕಳೆದ ಸೀಸನ್ನ ಅಂಕಿ ಅಂಶಗಳನ್ನು ಗಮನಿಸಿದರೆ, ರಾಜಸ್ಥಾನ್ ರಾಯಲ್ಸ್ಗೆ 2 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸೋಲುಣಿಸಿದೆ. ಹಾಗೆಯೇ ಕಳೆದ 10 ಪಂದ್ಯಗಳಲ್ಲಿ ರಾಜಸ್ಥಾನ್ 5 ರಲ್ಲಿ ಗೆಲುವು ಸಾಧಿಸಿದರೆ, ಡೆಲ್ಲಿ ಕೂಡ ಅಷ್ಟೇ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಾಗ್ಯೂ ಕೊನೆಯ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಡೆಲ್ಲಿ ವಿರುದ್ದ ಗೆಲ್ಲಲಾಗಲಿಲ್ಲ ಎಂಬುದು ವಿಶೇಷ. ಹೀಗಾಗಿ ಡೆಲ್ಲಿ ವಿರುದ್ದದ ಸೋಲಿನ ಸರಪಳಿಯಿಂದ ಹೊರಬರಲು ಇಂದಿನ ಪಂದ್ಯದಲ್ಲಿ ಆರ್ಆರ್ ಗೆಲ್ಲಲೇಬೇಕು.
ಇನ್ನು ಬ್ಯಾಟ್ಸ್ಮನ್ಗಳ ಅಂಕಿ ಅಂಶಗಳನ್ನು ಗಮನಿಸಿದರೆ ಎರಡೂ ತಂಡಗಳಲ್ಲಿ ಮಿಂಚಿದ ಆಟಗಾರರು ಪ್ರಸ್ತುತ ತಂಡಗಳಿಲ್ಲ ಎಂಬುದು ವಿಶೇಷ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಜಸ್ಥಾನ್ ಪರ ಅಜಿಂಕ್ಯ ರಹಾನೆ 601 ರನ್ ಕಲೆಹಾಕಿದ್ದಾರೆ. ಆದರೆ ರಹಾನೆ ಇದೀಗ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಹಾಗೆಯೇ ರಾಜಸ್ಥಾನ್ ವಿರುದ್ದ ಅತೀ ಹೆಚ್ಚು ರನ್ ಕಲೆಹಾಕಿದ ಡೆಲ್ಲಿ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. ವೀರು ಆರ್ಆರ್ ವಿರುದ್ದ ಒಟ್ಟು 295 ಬಾರಿಸಿರುವುದು ಶ್ರೇಷ್ಠ ದಾಖಲೆ. ಅದೇ ರೀತಿ ಡೆಲ್ಲಿ ವಿರುದ್ದ ರಾಜಸ್ಥಾನ್ ಪರ ರಾಹುಲ್ ದ್ರಾವಿಡ್ ಕೂಡ ಒಟ್ಟು 253 ರನ್ ಕಲೆಹಾಕಿದ್ದಾರೆ. ಆದರೆ ಇವರ್ಯಾರು ಪ್ರಸ್ತುತ ತಂಡಗಳನ್ನು ಪ್ರತಿನಿಧಿಸುತ್ತಿಲ್ಲ. ಹೀಗಾಗಿ ಬ್ಯಾಟ್ಸ್ಮನ್ಗಳ ಅಂಕಿ ಅಂಶ ಪರಿಗಣನೆಗೆ ಬರುವುದಿಲ್ಲ ಎಂದೇ ಹೇಳಬಹುದು.
ಹಾಗೆಯೇ ಬೌಲರುಗಳ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ ಉತ್ತಮ ಬೌಲಿಂಗ್ ಮಾಡಿದ್ದಾರೆ. ಮಿಶ್ರಾ ಇದುವರೆಗೆ 20 ವಿಕೆಟ್ ಉರುಳಿಸುವ ಮೂಲಕ ಉಭಯ ತಂಡಗಳಲ್ಲಿನ ಟಾಪ್ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಡೆಲ್ಲಿ ಪರ ಆಡಿದ್ದ ಪರ್ವೇಜ್ ಮೆಹರೂಫ್ 11 ವಿಕೆಟ್ ಪಡೆದಿದ್ದರು. ಹಾಗೆಯೇ ಆರ್ಆರ್ ಪರ ಆಡಿದ್ದ ಶೇನ್ ವಾಟ್ಸನ್ ಡೆಲ್ಲಿ ವಿರುದ್ದ 9 ವಿಕೆಟ್ ಕಬಳಿಸಿದ್ದರು.