RCB vs CSK ಮದಗಜಗಳ ಕಾಳಗಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಅಣಿಗೊಂಡಿದೆ. ಉಭಯ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಜಯಗಳಿಸುವ ಮೂಲಕ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಮೊದಲು ಸೋಲಿನ ಬಳಿಕ ಬಲಿಷ್ಠವಾಗಿ ಕಂಬ್ಯಾಕ್ ಮಾಡಿರುವ ಸಿಎಸ್ಕೆ ಸತತ ಮೂರು ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಸಿಎಸ್ಕೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಸಿಎಸ್ಕೆ ಆರ್ಸಿಬಿ ಕದನದಲ್ಲಿ ಟಾಪ್ ರನ್ ಸರದಾರ ಯಾರು ಎಂದು ನೋಡುವುದಾದರೆ...ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ ಸಿಎಸ್ಕೆ ವಿರುದ್ದ 26 ಇನಿಂಗ್ಸ್ನಲ್ಲಿ 901 ರನ್ ಬಾರಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಮೂಡಿಬಂದಿವೆ. ಇದೀಗ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದು, ಹೀಗಾಗಿ ಈ ಬಾರಿ ಕೂಡ ಕೊಹ್ಲಿ ಬ್ಯಾಟ್ನಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು. ಇನ್ನು ಎಬಿಡಿ ಕೂಡ ಸಿಎಸ್ಕೆ ವಿರುದ್ದ ಆರ್ಭಟಿಸಿದ್ದಾರೆ. 18 ಇನಿಂಗ್ಸ್ಗಳಿಂದ ಎಬಿಡಿ 383 ರನ್ ಬಾರಿಸಿದ್ದಾರೆ
ಅತ್ತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್ಸಿಬಿ ವಿರುದ್ದ 735 ರನ್ ಬಾರಿಸಿದ್ದಾರೆ. ಆದರೆ ಧೋನಿ ಕಳೆದ ಸೀಸನ್ ಐಪಿಎಲ್ನಿಂದ ರನ್ಗಳಿಸಲು ಪರದಾಡುತ್ತಿದ್ದಾರೆ. ಅದು ಈ ಸೀಸನ್ನಲ್ಲೂ ಮುಂದುವರೆದಿದೆ. ಹಾಗೆಯೇ ಸುರೇಶ್ ರೈನಾ ಆರ್ಸಿಬಿ ವಿರುದ್ದ 669 ರನ್ ಕಲೆಹಾಕಿದ್ದಾರೆ. ಹೀಗಾಗಿ ರೈನಾ ವಿರುದ್ದ ಆರ್ಸಿಬಿ ಹೊಸ ರಣತಂತ್ರ ಹೆಣೆಯಲಿದೆ.
ಬೌಲಿಂಗ್ನಲ್ಲಿ ಡ್ವೇನ್ ಬ್ರಾವೊ ಆರ್ಸಿಬಿ ವಿರುದ್ದ 13 ವಿಕೆಟ್ ಕಬಳಿಸಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಬ್ರಾವೋ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಆರ್ಸಿಬಿ ವಿರುದ್ದ ಆಡಲಿದ್ದಾರಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಇನ್ನು ರವೀಂದ್ರ ಜಡೇಜಾ ಕೂಡ 12 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಆರ್ಸಿಬಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಸಿಎಸ್ಕೆ ವಿರುದ್ದ 12 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಸಿಎಸ್ಕೆ ತಂಡಕ್ಕೆ ದೀಪಕ್ ಚಹರ್ ಆರಂಭಿಕ ಯಶಸ್ಸು ತಂದುಕೊಡುತ್ತಿದ್ದರೆ, ಆರ್ಸಿಬಿ ತಂಡದಲ್ಲಿ ಪವರ್ಪ್ಲೇನಲ್ಲೇ ವಿಕೆಟ್ ಉರುಳಿಸುವ ಮೊಹಮ್ಮದ್ ಸಿರಾಜ್ ಇದ್ದಾರೆ.