ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ ನಡೆದ ಐಪಿಎಲ್ನಲ್ಲಿ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಒಟ್ಟಾರೆ ಸೀಸನ್ನಲ್ಲಿ ಗಳಿಸಿದ್ದು 973 ರನ್ಗಳು. ಕೊಹ್ಲಿಯ ಈ ಏಕಾಂಗಿ ಪ್ರದರ್ಶನದ ಹೊರತಾಗಿಯೂ ಆರ್ಸಿಬಿಗೆ ಫೈನಲ್ ಗೆಲ್ಲಲಾಗಲಿಲ್ಲ. ಹಾಗೆಯೇ ಕಳೆದ ಮೂರು ಸೀಸನ್ಗಳಿಂದಲೂ ಈ ದಾಖಲೆಯ ಅಸುಪಾಸಿನಲ್ಲಿ ಯಾವುದೇ ಬ್ಯಾಟ್ಸ್ಮನ್ ರನ್ಗಳಿಸಿಲ್ಲ ಎಂಬುದು ವಿಶೇಷ.
ಐಪಿಎಲ್ನಲ್ಲಿ 3 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಏಕೈಕ ಬೌಲರ್ ಅಮಿತ್ ಮಿಶ್ರಾ. ದೆಹಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ಮಾಡುತ್ತಿರುವ ಹಿರಿಯ ಸ್ಪಿನ್ನರ್ 2008, 2011 ಮತ್ತು 2013ರ ಸೀಸನ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಐಪಿಎಲ್ನಲ್ಲಿ ಒಟ್ಟು 15 ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ರೂ, ಅಮಿತ್ ಮಿಶ್ರಾ ಅವರ ಈ ದಾಖಲೆಯನ್ನು ಮುರಿಯಲಾಗಲಿಲ್ಲ. ಹೀಗಾಗಿ ಈ ಬಾರಿ ಈ ದಾಖಲೆಯನ್ನು ಯಾರಾದರೂ ಅಳಿಸಿ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜಸ್ಥಾನ್ ರಾಯಲ್ಸ್ ಪರ ಚೊಚ್ಚಲ ಐಪಿಎಲ್ ಸೀಸನ್ನಲ್ಲಿ ಕಣಕ್ಕಿಳಿದಿದ್ದ ಸೊಹೈಲ್ ತನ್ವೀರ್ ಅವರ 14 ರನ್ಗೆ 6 ವಿಕೆಟ್ ದಾಖಲೆಯನ್ನು ಕಳೆದ ಬಾರಿ ಮುಂಬೈ ಇಂಡಿಯನ್ಸ್ ಬೌಲರ್ ಅಲ್ಜಾರಿ ಜೋಸೆಫ್ ಮುರಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿದ್ದ ಅಲ್ಜಾರಿ ಜೋಸೆಫ್ 12 ರನ್‌ಗಳಿಗೆ 6 ವಿಕೆಟ್ ಉರುಳಿಸಿದ್ದರು. ಅಂದರೆ ಸೊಹೈಲ್ ತನ್ವೀರ್ ದಾಖಲೆ ಬರೆದು 11 ವರ್ಷಗಳ ಬಳಿಕ ರೆಕಾರ್ಡ್ನ್ನು ಅಲ್ಜಾರಿ ಅಳಿಸಿ ಹಾಕಿದ್ದರು. ಹೀಗಾಗಿ ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.