2010 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 246 ರನ್ ಗಳಿಸಿತ್ತು. ಇದು ಸಿಎಸ್ಕೆ ಕಲೆಹಾಕಿದ ಅತ್ಯಧಿಕ ಮೊತ್ತ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ 127 ರನ್ ಬಾರಿಸಿದ್ದರು. ಈ ಬೃಹತ್ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ ಕೂಡ ಅದ್ಭುತವಾಗಿ ಬೆನ್ನಟ್ಟಿತು. ಆದರೆ ಕೊನೆ ಘಳಿಗೆಯಲ್ಲಿ ವಿಕೆಟ್ ಕೈ ಚೆಲ್ಲುವ ಮೂಲಕ 20 ಓವರ್ಗಳಲ್ಲಿ ಐದು ವಿಕೆಟ್ಗೆ 223 ರನ್ ಗಳಿಸಲಷ್ಟೇ ಶಕ್ತರಾದರು.
2016 ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ 248 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅದ್ಭುತ ಶತಕಗಳನ್ನು ಸಿಡಿಸಿದ್ದರು. ಆ ಸಮಯದಲ್ಲಿ ಸುರೇಶ್ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕರಾಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಯನ್ಸ್ ತಂಡ ಕೇವಲ 104 ರನ್ಗೆ ಆಲೌಟ್ ಆಯಿತು. ಕೊಹ್ಲಿ-ಎಬಿಡಿ ಬ್ಯಾಟಿಂಗ್ ಹೊರತಾಗಿ ಈ ಪಂದ್ಯದಲ್ಲಿ ಕ್ರಿಸ್ ಜೋರ್ಡಾನ್ 4 ಮತ್ತು ಯುಜ್ವೇಂದ್ರ ಚಹಲ್ 3 ವಿಕೆಟ್ ಪಡೆದು ಮಿಂಚಿದ್ದರು.
2013 ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್ಮನ್ಗಳು ಅಕ್ಷರಶಃ ಸಿಡಿದಿದ್ದರು. 5 ವಿಕೆಟ್ ಕಳೆದುಕೊಂಡು ಆರ್‌ಸಿಬಿ 263 ರನ್ ಗಳಿಸಿತ್ತು. ಇದು ಆರ್‌ಸಿಬಿ ತಂಡದ ಮತ್ತು ಐಪಿಎಲ್ ಇತಿಹಾಸದ ಗರಿಷ್ಠ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಅಜೇಯ 175 ರನ್ ಗಳಿಸಿರುವುದು ದಾಖಲೆಯಾಗಿ ಉಳಿದಿದೆ. ಇನ್ನು ಬೌಲಿಂಗ್ನಲ್ಲೂ ಮಿಂಚಿದ ಆರ್‌ಸಿಬಿ ಪುಣೆ ವಾರಿಯರ್ಸ್ ಇಂಡಿಯಾ 130 ರನ್‌ಗಳ ಅಂತರದಿಂದ ಜಯಗಳಿಸಿತು.