ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ತಲುಪಿದೆ. ತಲಾ ಒಂದೆರಡು ಪಂದ್ಯಗಳು ಮಾತ್ರ ಉಳಿದಿದ್ದು, ಪ್ಲೇ ಆಫ್ಗೆ ಯಾರು ಅರ್ಹತೆ ಪಡೆಯಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ಗಳಲ್ಲಿ ಸ್ಥಾನ ಗಳಿಸಿದ್ದು, ಪ್ರಸ್ತುತ ಪಾಯಿಂಟ್ಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದಿನ ಮೂರು ತಂಡಗಳು ಯಾವುವು ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಉಳಿದ ಮೂರು ಪ್ಲೇ ಆಫ್ ತಾಣಗಳಿಗಾಗಿ ಆರು ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿವೆ. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕಿಂಗ್ಸ್ ಇಲೆವೆನ್ ಪಂಜಾಬ್, ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ.
ಮುಂಬೈ ಇಂಡಿಯನ್ಸ್ - ಎರಡು ಪಂದ್ಯಗಳು ಬಾಕಿ ಇರುವಾಗ ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದೆ. ಅಲ್ಲದೆ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅಗ್ರ ಉಳಿಸಿಕೊಳ್ಳುವುದೇ ಮುಂಬೈನ ಗುರಿ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು - 14 ಪಾಯಿಂಟ್ಗಳನ್ನು ಹೊಂದಿರುವ ಕೊಹ್ಲಿ ಪಡೆ ಪ್ಲೇ-ಆಫ್ ಬೆರ್ತ್ ಪ್ರವೇಶಿಸಲು ಮುಂದಿನ 2 ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಸಾಧಿಸಬೇಕು. ಆದರೆ ಆರ್ಸಿಬಿ ಗುರಿ ಎರಡನ್ನೂ ಗೆದ್ದು ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದಾಗಿದೆ. ಈ ಎರಡೂ ಪಂದ್ಯಗಳಲ್ಲಿ ಸೋತರೆ, 14 ಪಾಯಿಂಟ್ಗಳಿಗೆ ಸೀಮಿತವಾಗಲಿದೆ. ಇದರೊಂದಿಗೆ, ಇತರೆ ತಂಡಗಳು ಗೆದ್ದರೆ 14 ಅಂಕಗಳೊಂದಿಗೆ ನೆಟ್ ರನ್ರೇಟ್ ಮೂಲಕ ಪ್ಲೇ ಆಫ್ ಅರ್ಹತೆ ನಿರ್ಧರಿಸಬೇಕಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದ್ದು, ಇದರಲ್ಲಿ ಒಂದು ಗೆಲುವು ದಾಖಲಿಸುವುದು ಅನಿವಾರ್ಯ.
ಡೆಲ್ಲಿ ಕ್ಯಾಪಿಟಲ್ಸ್ - ಡೆಲ್ಲಿ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಮೊದಲ ಎರಡು ಸ್ಥಾನಗಳನ್ನು ತಲುಪುವ ಗುರಿ ಹೊಂದಿದೆ. ಒಂದು ಗೆಲುವು ದಾಖಲಿಸಿದರೆ ಪ್ಲೇ ಆಫ್ ಖಚಿತವಾಗಲಿದ್ದು, ಇದರ ಹೊರತಾಗಿ ಎರಡೂ ಪಂದ್ಯಗಳನ್ನು ಕಳೆದುಕೊಂಡರೆ, 14 ಅಂಕಗಳನ್ನು ಮಾತ್ರ ಹೊಂದಿರಲಿದೆ. ಇದು ಸಂಭವಿಸಿದರೆ ನೆಟ್ ರನ್ ರೇಟ್ ಮೊರೆ ಹೋಗಬೇಕಾಗುತ್ತದೆ. ಅದು ಕೂಡ ಇತರೆ ತಂಡಗಳ ಜಯದ ಮೇಲೆ ಪ್ಲೇ ಆಫ್ ಅವಕಾಶ ನಿರ್ಧಾರವಾಗಲಿದೆ. ಹೀಗಾಗಿ ಒಂದು ಗೆಲುವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಅನಿವಾರ್ಯ. ಇನ್ನು ಡೆಲ್ಲಿ ತಂಡಕ್ಕೆ ಉಳಿದಿರುವುದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಪಂದ್ಯ ಎಂಬುದು ವಿಶೇಷ.
ಕಿಂಗ್ಸ್ ಇಲೆವೆನ್ ಪಂಜಾಬ್ - ಸತತ ಸೋಲಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಭರ್ಜರಿ ಕಂಬ್ಯಾಕ್ ಮಾಡಿದೆ. ಅಷ್ಟೇ ಅಲ್ಲದೆ ಪ್ಲೇ ಆಫ್ ಅವಕಾಶಗಳನ್ನು ಉಳಿಸಿಕೊಂಡಿದೆ. ಅವರು ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ, ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಇದರ ಹೊರತಾಗಿ ಒಂದು ಗೆಲುವು ಸಾಧಿಸಿದರೆ ಇತರೆ ತಂಡಗಳ ಫಲಿತಾಂಶ ಪಂಜಾಬ್ ಪ್ಲೇ ಆಫ್ ಅವಕಾಶವನ್ನು ನಿರ್ಧರಿಸಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯಗಳಲ್ಲಿ ಗೆಲುವು ರಾಹುಲ್ ಪಡೆಗೆ ಅನಿವಾರ್ಯ.
ಕೋಲ್ಕತಾ ನೈಟ್ ರೈಡರ್ಸ್- ಸಿಎಸ್ಕೆ ವಿರುದ್ಧದ ಸೋಲಿನ ಬಳಿಕ ಕೆಕೆಆರ್ 12 ಪಾಯಿಂಟ್ಗಳೊಂದಿಗೆ 5ನೇ ಸ್ಥಾನದಲ್ಲಿದೆ. ರಾಜಸ್ಥಾನ್ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದರೆ ಅವರಿಗೆ ಪ್ಲೇ-ಆಫ್ ಖಾತರಿಯಿಲ್ಲ. ನೆಟ್ ರನ್ ರೇಟ್ ಮತ್ತಷ್ಟು ಏರಿದರೆ ಮಾತ್ರ ಭರವಸೆ ಉಳಿಸಿಕೊಳ್ಳಬಹುದು. ಅಲ್ಲದೆ, ಕಿಂಗ್ಸ್ ಇಲೆವೆನ್ ಮತ್ತು ಸನ್ರೈಸರ್ಸ್ ತಮ್ಮ ಮುಂದಿನ ಪಂದ್ಯಗಳಲ್ಲಿ ಸೋತರೆ, ಕೋಲ್ಕತ್ತಾಗೆ ಅವಕಾಶವಿದೆ.
ಸನ್ರೈಸರ್ಸ್ ಹೈದರಾಬಾದ್: ಆರ್ಸಿಬಿ ಮತ್ತು ಮುಂಬೈ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಹೈದರಾಬಾದ್ ಪ್ಲೇಆಫ್ ತಲುಪಬಹುದು. ಈ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ 14 ಅಂಕಗಳನ್ನು ಪಡೆಯುತ್ತಾರೆ. ಇದಲ್ಲದೆ ಹೈದರಾಬಾದ್ಗೆ ಇತರ ಪಂದ್ಯಗಳ ಫಲಿತಾಂಶವೂ ನಿರ್ಣಾಯಕ. ಮುಂಬೈ ಹೊರತುಪಡಿಸಿ, ಅಂಕ ಪಟ್ಟಿಯಲ್ಲಿರುವ ಅಗ್ರ ಮೂರು ತಂಡಗಳು ಸೋಲನ್ನು ಎದುರಿಸಬೇಕಾಗುತ್ತದೆ. ಪಂಜಾಬ್, ಬೆಂಗಳೂರು ಮತ್ತು ಡೆಲ್ಲಿ ತಂಡಗಳಲ್ಲಿ 2 ಟೀಮ್ 14 ಪಾಯಿಂಟ್ಗಳ ಒಳಗೆ ಇದ್ದರೆ ಮತ್ತು ನೆಟ್ ರನ್ ರೇಟ್ ಉತ್ತಮವಾಗಿದ್ದರೆ, ಹೈದರಾಬಾದ್ ಪ್ಲೇಆಫ್ಗಳನ್ನು ಭದ್ರಪಡಿಸಿಕೊಳ್ಳಬಹುದು. ಮುಂದಿನ ಪಂದ್ಯಗಳಲ್ಲಿ SRH ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿಯನ್ನು ಎದುರಿಸಲಿದೆ.
ರಾಜಸ್ಥಾನ್ ರಾಯಲ್ಸ್- ಹೈದರಾಬಾದ್ನಂತೆ, ರಾಜಸ್ಥಾನವು ಪ್ರಸ್ತುತ 10 ಅಂಕಗಳನ್ನು ಹೊಂದಿದೆ. ಅವರಿಗೆ ಎರಡು ಪಂದ್ಯಗಳು ಉಳಿದಿವೆ. ಎರಡೂ ಗೆದ್ದರೆ 14 ಅಂಕಗಳಾಗಲಿವೆ. ನೆಟ್ ರನ್ ರೇಟ್ ಉತ್ತಮವಾಗಿದ್ದರೆ ಮತ್ತು ಬೆಂಗಳೂರು, ಡೆಲ್ಲಿ ಮತ್ತು ಪಂಜಾಬ್ ತಂಡಗಳಲ್ಲಿ ಎರಡು ಟೀಮ್ 14 ಪಾಯಿಂಟ್ಗಳಿಗೆ ಇಳಿದರೆ, ರಾಜಸ್ಥಾನ ಪ್ಲೇಆಫ್ ತಲುಪಬಹುದು. ಮುಂದಿನ ಪಂದ್ಯದಲ್ಲಿ RR ತಂಡ KKR ಅನ್ನು ಎದುರಿಸಲಿದೆ.