ಚಾಣಾಕ್ಷ ನಾಯಕ ಯಶಸ್ವಿ ತಂಡವೊಂದನ್ನು ರೂಪಿಸುತ್ತಾರೆ. ಈ ಮಾತು ಚುಟುಕು ಕ್ರಿಕೆಟ್ನಲ್ಲಿ ನಿರಂತರ ಸಾಬೀತಾಗುತ್ತಿದೆ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ನಲ್ಲಿ ಅತೀ ಹೆಚ್ಚು ಯಶಸ್ಸನ್ನು ಸಾಧಿಸಿದೆ. ಇದರ ಕ್ರೆಡಿಟ್ ಕ್ರಮವಾಗಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಅವರಿಗೆ ಸಲ್ಲುತ್ತದೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಿಟ್ಮ್ಯಾನ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. 2013 ರಿಂದ 2019 ರವರೆಗೆ ರೋಹಿತ್ ಶರ್ಮಾ ಐಪಿಎಲ್ನಲ್ಲಿ 104 ಪಂದ್ಯಗಳ ನಾಯಕತ್ವ ವಹಿಸಿದ್ದರು. ಅದರಲ್ಲಿ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, 42 ಮ್ಯಾಚ್ಗಳಲ್ಲಿ ಸೋತಿದ್ದರು. ಇನ್ನು ಎರಡು ಪಂದ್ಯಗಳ ಫಲಿತಾಂಶ ಸಮಬಲಗೊಂಡಿವೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ. 2011 ರಿಂದ ಕೊಹ್ಲಿ ಆರ್ಸಿಬಿ ನಾಯಕತ್ವದ ಜವಾಬ್ದಾರಿವಹಿಸಿಕೊಂಡಿದ್ದಾರೆ. ಕಳೆದ 9 ವರ್ಷಗಳಲ್ಲಿ ಇದುವರೆಗೂ ತಮ್ಮ ಸಾರಥ್ಯದಲ್ಲಿ ಐಪಿಎಲ್ ಟ್ರೋಫಿ ಮಾತ್ರ ಗೆಲ್ಲಲಾಗಲಿಲ್ಲ. 2016 ರ ಐಪಿಎಲ್ ಸೀಸನ್ನಲ್ಲಿ ಫೈನಲ್ಗೆ ತಲುಪಿದರೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ವಿರಾಟ್ ಕೊಹ್ಲಿಯ ಮೇಲೆ ಮ್ಯಾನೇಜ್ಮೆಂಟ್ ಈಗಲೂ ನಂಬಿಕೆ ಉಳಿಸಿಕೊಂಡಿದ್ದು, ಅವರನ್ನೇ ಕಪ್ತಾನನಾಗಿ ಮುಂದುವರೆಸಿದ್ದಾರೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದಲ್ಲಿ, ಸಿಎಸ್ಕೆ 3 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಲವಾರು ಬಾರಿ ಪ್ಲೇಆಫ್ ಕೂಡ ತಲುಪಿತ್ತು. ಚೊಚ್ಚಲ ಐಪಿಎಲ್ನಿಂದಲೂ ಧೋನಿ ಸಿಎಸ್ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಒಂದು ಸೀಸನ್ನಲ್ಲಿ ರೈಸಿಂಗ್ ಪುಣೆ ಸೂಪರ್ಜಿಯಂಟ್ಸ್ಗೆ ನಾಯಕತ್ವ ವಹಿಸಿದ್ದರು.