

ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮದ ಬಣ್ಣವು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದನ್ನು ನಿರ್ಲಕ್ಷಿಸಿದರೆ ತ್ವಚೆಯು ಕಂದು ಬಣ್ಣದಲ್ಲೇ ಉಳಿದು ಬಿಡುತ್ತದೆ. ಇಂತಹ ಸಮಸ್ಯೆಗೆ ಕಿತ್ತಳೆ ಹಣ್ಣಿನಿಂದ ಪರಿಹಾರ ಕಾಣಬಹುದು.


ಒಂದು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ ಸ್ವಲ್ಪ ಅರಿಶಿನ ಮತ್ತು ಕಾಲೆಮೈನ್ ಪೌಡರ್ ಅಥವಾ ಶ್ರೀಗಂಧದ ಹನಿಗಳನ್ನು ಮಿಶ್ರಣ ಮಾಡಬೇಕು. ಬಳಿಕ ಈ ಪೇಸ್ಟ್ ಅನ್ನು ಕಂದು ಬಣ್ಣಕ್ಕೆ ತಿರುಗಿದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಐದು ನಿಮಿಷಗಳ ನಂತರ ಇದನ್ನು ನೀರಿನಿಂದ ತೊಳೆದುಕೊಂಡರೆ ತ್ವಚೆಯು ನೈಸರ್ಗಿಕ ಬಣ್ಣಕ್ಕೆ ಹಿಂತಿರುಗುತ್ತದೆ.


ಕಿತ್ತಲೆ ರಸದಲ್ಲಿ ಸಿಟ್ರಿಕ್ ಆಮ್ಲವು ಹೆಚ್ಚಾಗಿರುತ್ತದೆ. ಇದನ್ನು ನೈಸರ್ಗಿಕ ಬ್ಲೀಚ್ ಆಗಿ ಬಳಸಿಕೊಳ್ಳಬಹುದು. ಕಿತ್ತಲೆ ರಸವನ್ನು ಐಸ್ ಕ್ಯೂಬ್ ಮಾಡುವ ಮೂಲಕ ಟ್ಯಾನ್ ಆದ ಚರ್ಮದ ಭಾಗಕ್ಕೆ ಸವರುವುದರಿಂದ ಕಂದು ಬಣ್ಣದಿಂದ ಮುಕ್ತಿ ಪಡೆಯಬಹುದು.


ಪ್ರತಿನಿತ್ಯ ಕಿತ್ತಲೆ ಹಣ್ಣಿನ ತಿರುಳನ್ನು ತ್ವಚೆಯ ಭಾಗಕ್ಕೆ ಸವರುವುದರಿಂದ ಕೂಡ ಟ್ಯಾನಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.


ಕಿತ್ತಳೆ ಹಣ್ಣಿನಿಂದ ತಯಾರಿಸಲಾಗುವ ಸೌಂದರ್ಯ ಉತ್ಪನ್ನವನ್ನು ಬಳಸುವುದರಿಂದ ಕೂಡ ತ್ವಚೆಯ ಕಂದು ಬಣ್ಣವನ್ನು ಹೋಗಲಾಡಿಸಬಹುದು.


ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಮತ್ತು ಅಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುತ್ತದೆ. ಇದು ನೈಸರ್ಗಿಕ ಕ್ಲೀನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ತ್ವಚೆಯು ಹೆಚ್ಚು ಕಾಂತಿಯುತವಾಗುತ್ತದೆ.